

ನೆಲ್ಯಾಡಿ: ದೇಶದ ಅಗ್ರಮಾನ್ಯ ಇಂಜಿನಿಯರ್, ದಾರ್ಶನಿಕ, ಯೋಜಕ, ದಂಡನಾಯಕ, ತಂತ್ರಜ್ಞಾನ ಪ್ರವರ್ತಕ, ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ 163ನೇ ಜನ್ಮದಿನಾಚರಣೆ ಪ್ರಯುಕ್ತ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಯಲ್ಲಿ ಅಭಿಯಂತರರ ದಿನಾಚರಣೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವು ಸರ್ ಎಂ.ವಿ. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಯಿತು. ನಂತರ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ಅವರು ಸರ್ ಎಂ.ವಿ. ಅವರ ಜೀವನ ಪಯಣ, ಕಠಿಣ ಶ್ರಮ, ದೇಶ-ವಿದೇಶಕ್ಕೆ ಕೊಟ್ಟ ಸೇವೆ, ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾವತಿ ಇಸ್ಪಾತ ಕಾರ್ಖಾನೆ, ಮೈಸೂರಿನ ಆರ್ಥಿಕ ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಒಬ್ಬ ಇಂಜಿನಿಯರ್ ಸಮಾಜದ ನಿಜವಾದ ಶಿಲ್ಪಿ. ನಮ್ಮ ದೇಶದ ಪ್ರಗತಿಯ ಹಿಂದೆ ಇಂಜಿನಿಯರ್‌ಗಳ ಶ್ರಮ ಅಡಗಿದೆ, ಎಂದು ಅವರು ಹೇಳಿದರು.
ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಇಂಜಿನಿಯರ್ಸ್ ಡೇ ಕೇವಲ ಆಚರಣೆಗಷ್ಟೇ ಸೀಮಿತವಾಗಬಾರದು. ಪ್ರತಿಯೊಬ್ಬ ತರಬೇತಿಗಾರನು ತನ್ನ ವೃತ್ತಿಯಲ್ಲಿ ನಿಷ್ಠೆ, ಶಿಸ್ತು, ನವೀನ ಆವಿಷ್ಕಾರಾತ್ಮಕ ಚಿಂತನೆ ಬೆಳೆಸಿಕೊಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಸರ್ ಎಂ.ವಿ. ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು. ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್ ಸ್ವಾಗತಿಸಿದರು.






