

ನೆಲ್ಯಾಡಿ: ಮಾದಕ ದ್ರವ್ಯ ಮುಕ್ತ ವ್ಯಕ್ತಿಗಳಿಂದಲೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ. ಇಂದು ಸಮಾಜದಲ್ಲಿ ನಡೆಯುತ್ತಿರುವ ಅವ್ಯವಹಾರಗಳು, ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿರುವ ಕೆಟ್ಟ ಚಟಗಳು, ಅವರ ಜೀವನವನ್ನು ಮಾನಸಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಹಾಳು ಮಾಡುವ ಅಪಾಯವಿದೆ. ನಾವು ನಮ್ಮ ಜೀವನದಲ್ಲಿ ಯಾವ ಹೆಜ್ಜೆ ಇಡಬೇಕು, ಕೆಟ್ಟ ಚಟಗಳಿಂದ ಹೇಗೆ ದೂರವಿದ್ದು ನಮ್ಮ ಬದುಕನ್ನು ಸಾರ್ಥಕಗೊಳಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಉಪ್ಪಿನಂಗಡಿ ವಲಯದ ಸಬ್ ಇನ್ಸ್ಪೆಕ್ಟರ್ ಅವಿನಾಶ್ ಎಚ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನೆಲ್ಯಾಡಿ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆ ಇವರ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಅಧ್ಯಕ್ಷ ಸೀನಿಯರ್ ಪಿಪಿಎಫ್ ಪ್ರಕಾಶ್ ಕೆ.ವೈ ವಹಿಸಿದರು. ವೇದಿಕೆಯಲ್ಲಿ ಬೆಥನಿ ಐಟಿಐ ನೆಲ್ಯಾಡಿ ನಿರ್ದೇಶಕರಾದ ಫಾ.ಜಾರ್ಜ್ ಸಾಮುವೆಲ್ ಒಐಸಿ, ಪ್ರಾಂಶುಪಾಲರಾದ ಸಜಿ ಕೆ. ತೋಮಸ್, ನೆಲ್ಯಾಡಿ ಪೋಲಿಸ್ ಹೊರಠಾಣಾ ಸಿಬ್ಬಂದಿಗಳಾದ ಪ್ರವೀಣ್, ಸಾಗರ್ ಮತ್ತು ರವಿ ಉಪಸ್ಥಿತರಿದ್ದರು.
ಸಬ್ ಇನ್ಸ್ಪೆಕ್ಟರ್ ಅವಿನಾಶ್ ಎಚ್ ಅವರನ್ನು ಗೌರವಿಸಲಾಯಿತು. ಕಿರಿಯ ತರಬೇತಿದಾರ ವರ್ಗೀಸ್ ಎನ್.ಟಿ ವೇದಿಕೆಗೆ ಆಹ್ವಾನಿಸಿದರು. ಕಿರಿಯ ತರಬೇತಿದಾರ ಸುಬ್ರಾಯ ಸಾಯಕ್ ಅತಿಥಿಗಳನ್ನು ಪರಿಚಯಿಸಿದರು. ನೆಲ್ಯಾಡಿ ಸೀನಿಯರ್ ಚೇಂಬರ್ ಕಾರ್ಯದರ್ಶಿ ಸೀನಿಯರ್ ಉಲಹನ್ನಾನ್ ಪಿ.ಎಂ ವಂದಿಸಿದರು.






