

ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಪೇಟೆಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಸಿ ಅಂಗಡಿ ಮಾಲೀಕರಾದ ಮಹಮ್ಮದ್ ರಫೀಕ್ ಎಸ್.ಡಿ. ಅವರ ಬಾಬ್ತು ಅಡಿಕೆ ಸಂಗ್ರಹಿಸುವ ಗೋಡೌನ್‌ನಿಂದ ಸೆ.12ರ ರಾತ್ರಿ ಕಳವು ನಡೆದಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/2025, ಕಲಂ 331(4), 305(ಎ), 3(5) ಬಿಎನ್‌ಎಸ್-2023 ರಂತೆ ಪ್ರಕರಣ ದಾಖಲಾಗಿತ್ತು.
ತನಿಖೆಯ ವೇಳೆ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಸುಪ್ರಿತ್ ಕೆ (22) ಮತ್ತು ಜಾಲ್ಸೂರು ಗ್ರಾಮದ ಮಹಮ್ಮದ್ ಸಿನಾನ್ (21) ಎಂಬ ಆರೋಪಿಗಳನ್ನು ಸೆ.19ರಂದು ಮಂಡೆಕೋಲು ಗ್ರಾಮದ ಮುರೂರು ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆಯಲಾಯಿತು.
ಆರೋಪಿಗಳು ಕಳವು ಮಾಡಿದ 1 ಕ್ವಿಂಟಲ್ ಅಡಿಕೆ ಹಾಗೂ ಅದನ್ನು ಸಾಗಿಸಲು ಬಳಸಿದ ಕೆಎ 21 ಸಿ 5862 ನಂಬರಿನ ಆಟೋ ರಿಕ್ಷಾವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






