

ನೆಲ್ಯಾಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕುಲಶೇಖರ, ಮಂಗಳೂರು ಇದರ 39ನೇ ವಾರ್ಷಿಕ ಸಾಮಾನ್ಯ ಸಭೆ ಕುಲಶೇಖರದ ಕೊರ್ಡೆಲ್ ಹಾಲ್ ಚರ್ಚ್ ಗೇಟ್‌ನಲ್ಲಿ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಜಿಲ್ಲಾವಾರು ವಿವಿಧ ವಿಭಾಗಗಳಲ್ಲಿ ಸಾಧನೆ ತೋರಿದ ಸಹಕಾರ ಸಂಘಗಳನ್ನು ಗುರುತಿಸಿ ಗೌರವಿಸಲಾಯಿತು. ಈ ವೇಳೆ ಕಡಬ ತಾಲೂಕು ನೆಲ್ಯಾಡಿ ಗ್ರಾಮ ರಾಮನಗರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ ಮಹಿಳಾ ಸಂಘ ಎಂಬ ಗೌರವಕ್ಕೆ ಪಾತ್ರವಾಯಿತು.
ಈ ಪ್ರಶಸ್ತಿಯನ್ನು ಸಂಘದ ಕಾರ್ಯದರ್ಶಿ ಕಮಲ ಬರೆಮೇಲು ರಾಮನಗರ, ಹಾಲಿ ಅಧ್ಯಕ್ಷೆ ರೂಪಾ ಬಲ್ಯ ಕೊಡಂಗೆ ಹಾಗೂ ಮಾಜಿ ಅಧ್ಯಕ್ಷೆ ಆಶಾ ಎಸ್. ಜೋಗಿತ್ತಾಯ ಇವರ ಸಮ್ಮುಖದಲ್ಲಿ ಸಂಘವನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಸಂಘದ ಹಾಲಿ ಹಾಗೂ ಮಾಜಿ ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂತೋಷ ವ್ಯಕ್ತಪಡಿಸಿದರು.






