

ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಸೋಮವಾರ ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ನಡೆಯಬೇಕಿತ್ತು. ಆದರೆ ಅಧಿಕಾರಿಗಳ ಗೈರುಹಾಜರಿ ಹಾಗೂ ಗ್ರಾಮಸ್ಥರ ನಿರಾಸಕ್ತಿ ಕಾರಣದಿಂದ ಕೋರಂ ಕೊರತೆ ಉಂಟಾಗಿ ವಿರೋಧದ ನಡುವೆ ಸಭೆಯನ್ನು ಮುಂದೂಡಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಬೇಬಿ ಅವರ ಅಧ್ಯಕ್ಷತೆಯಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಮಾರ್ಗದರ್ಶಿ ಅಧಿಕಾರಿ ಹೇಮಲತಾ ಅವರ ಮಾರ್ಗದರ್ಶನದಲ್ಲಿ ಸಭೆ ಆರಂಭವಾಗಬೇಕಿತ್ತು. ಆದರೆ 18 ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಕೇವಲ 8 ಇಲಾಖೆಯವರು ಮಾತ್ರ ಹಾಜರಾಗಿದರು. ಪಿಡಿಒ ದೀಪಕ್ ರಾಜ್ ವರದಿ ಓದಲು ಮುಂದಾದಾಗ, ಗ್ರಾಮಸ್ಥರಾದ ಲಕ್ಷ್ಮೀ ನಾರಾಯಣ ಮತ್ತು ಇತರರು ಅಧಿಕಾರಿಗಳ ಗೈರಿನ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳು ಬಾರದಿದ್ದರೆ ಗ್ರಾಮ ಸಭೆ ನಡೆಸಬಾರದು ಎಂದು ಆಗ್ರಹಿಸಿದರು.
ಮಾರ್ಗದರ್ಶಿ ಅಧಿಕಾರಿ ಗ್ರಾಮಸ್ಥರನ್ನು ಮನವೊಲಿಸಲು ಪ್ರಯತ್ನಿಸಿದರೂ, 12 ಗಂಟೆಯಾದರೂ ಅಧಿಕಾರಿಗಳು ಬಾರದ ಕಾರಣ, ಸಭೆಯನ್ನು ಮುಂದೂಡಲು ಒತ್ತಾಯ ಹೆಚ್ಚಾಯಿತು. ಕೆಲ ಗ್ರಾಮಸ್ಥರು ಪರ, ಕೆಲವರು ವಿರೋಧ ವ್ಯಕ್ತಪಡಿಸಿದ ಪರಿಣಾಮ ಪಿಡಿಒ ಗ್ರಾಮಸಭೆ ಮುಂದೂಡುವುದಾಗಿ ಘೋಷಿಸಿ ಸಭಾಂಗಣದಿಂದ ಹೊರಟರು. ಈ ಸಂದರ್ಭದಲ್ಲಿ ಸಭಾಂಗಣದಲ್ಲಿ ಮಾತಿನ ಚಕಮಕಿ ನಡೆಯಿತು. ಬಳಿಕ ಮಾರ್ಗದರ್ಶಿ ಅಧಿಕಾರಿ ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಂಡರು. ನಂತರ ಪಿಡಿಒ ಅವರು ಗ್ರಾಮಸಭೆಗೆ ಆಗಮಿಸಿ ಗ್ರಾಮಸಭೆಯ ನಿಯಮದ ಪ್ರಕಾರ ಶೇಕಡ ಶೇ.10 ಅಥವಾ 100 ಗ್ರಾಮಸ್ಥರು(ಯಾವುದು ಕಡಿಮೆಯೂ ಅದು) ಪ್ರಕಾರ ಗ್ರಾಮಸ್ಥರ ಕೋರಂ ಪೂರ್ಣವಾಗದ ಕಾರಣ ಸಭೆಯನ್ನು ಅಧಿಕೃತವಾಗಿ ಮುಂದೂಡಲಾಯಿತು.
ಇತ್ತೀಚಿನ ಗ್ರಾಮ ಸಭೆಗಳಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಸೇರಿ 60 ಮಂದಿ ಕೂಡ ಭಾಗವಹಿಸದ ಪರಿಸ್ಥಿತಿ ಕಂಡು ಬರುತ್ತಿದೆ. ಪಂಚಾಯಿತಿಯಿಂದ ಪ್ರಚಾರ ಮಾಡಿದರೂ ಗ್ರಾಮಸ್ಥರ ನಿರಾಸಕ್ತಿ ಹೆಚ್ಚುತ್ತಿದೆ. ಇದರಿಂದ ಸಭೆಗಳು ಕೇವಲ ದಾಖಲೆಗಾಗಿ ಮಾತ್ರ ನಡೆಯುತ್ತಿರುವಂತೆಯೇ ಕಾಣಿಸುತ್ತಿವೆ.
ಗ್ರಾಮಸ್ಥರ ಅಸಮಾಧಾನದ ಪ್ರಮುಖ ಕಾರಣವೆಂದರೆ, ಗ್ರಾಮ ಸಭೆಯಲ್ಲಿ ಚರ್ಚೆಯಾದ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗದೆ ವರ್ಷಗಳಿಂದ ಪುನರಾವರ್ತನೆ ಆಗುತ್ತಿವೆ. ಪಂಚಾಯಿತಿಯ ಅಲ್ಪ ಅನುದಾನ ಹಾಗೂ ಇಲಾಖೆಗಳ ಸಿಬ್ಬಂದಿ ಕೊರತೆಯು ಸಮಸ್ಯೆಗಳನ್ನು ಬಗೆಹರಿಸಲು ಅಡಚಣೆ ಆಗಿದೆ. ಗ್ರಾಮ ಸಭೆಯಲ್ಲಿ ಕೇವಲ ಕೆಲವು ಇಲಾಖೆಗಳೇ ಭಾಗವಹಿಸುವುದರಿಂದ ಉಳಿದ ಕಲಾಪಗಳು ತರಾತುರಿಯಲ್ಲಿ ಮುಗಿಯುತ್ತವೆ.
ಗ್ರಾಮಸ್ಥರು ಅಧಿಕಾರಿಗಳಿಗೆ ಬಾಯ್ಬೀಳುವ ಬದಲು ಸಮಸ್ಯೆಗಳಿಗೆ ನೈಜ ಪರಿಹಾರ ನೀಡುವ ಪ್ರಯತ್ನ ಮಾಡಬೇಕು, ಸರ್ಕಾರವೂ ಗ್ರಾಮ ಸಭೆಗಳಲ್ಲಿ ಇಲಾಖೆಗಳ ಕಡ್ಡಾಯ ಹಾಜರಾತಿಯನ್ನು ಖಚಿತಪಡಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ವೇದಿಕೆಯಲ್ಲಿ ನಿಯೋಜಿತ ಅಭಿವೃದ್ಧಿ ಅಧಿಕಾರಿ ಪರಮೇಶ್ವರ, ಕೆಲ ಇಲಾಖಾ ಅಧಿಕಾರಿಗಳು, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.






