ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸಾ ವಿಭಾಗ ಪ್ರಾರಂಭ – ಸ್ಥಳೀಯರಿಗೆ ಹೊಸ ಆಶಾಕಿರಣ

ಶೇರ್ ಮಾಡಿ

ನೆಲ್ಯಾಡಿ: ಸ್ಥಳೀಯ ಜನರ ಬಹುಕಾಲದ ನಿರೀಕ್ಷೆ ನೆರವೇರಿದ್ದು, ಅಶ್ವಿನಿ ಆಸ್ಪತ್ರೆ, ನೆಲ್ಯಾಡಿಯಲ್ಲಿ ಕಣ್ಣಿನ ಚಿಕಿತ್ಸಾ ವಿಭಾಗವನ್ನು ಅಧಿಕೃತವಾಗಿ ಸೆ.22ರಂದು ಪ್ರಾರಂಭಿಸಲಾಯಿತು.

ಆಪ್ಟೋಮೆಟ್ರಿಸ್ಟ್ ಎಸ್‌.ಶಾಂತರಾಜ್ ಉದ್ಘಾಟಿಸಿ ಮಾತನಾಡಿದ ಅವರು, ನೆಲ್ಯಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಣ್ಣಿನ ಚಿಕಿತ್ಸೆಗೆ ಈಗವರೆಗೂ ದೂರ ಪ್ರಯಾಣ ಮಾಡಬೇಕಾಗುತ್ತಿತ್ತು. ಈ ಹೊಸ ವಿಭಾಗದಿಂದ ಗ್ರಾಮೀಣ ಜನರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಆಸ್ಪತ್ರೆಯ ಈ ಹೆಜ್ಜೆ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಒಂದು ಮಹತ್ವದ ಬೆಳವಣಿಗೆ ಎಂದು ಹೇಳಿದರು.

ಡಾ.ಅಶ್ವಿನ್ ಸಾಗರ್ ಅವರು ಮಾತನಾಡಿ, ಕಣ್ಣಿನ ಕಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ, ಮುಂಗಾರು ಕಾಯಿಲೆಗಳು, ಕಣ್ಣಿನ ಸಂಖ್ಯೆ ಪರೀಕ್ಷೆ, ಗ್ಲೋಕೋಮಾ, ಕಣ್ಣಿನ ಶಸ್ತ್ರಚಿಕಿತ್ಸೆ ಹೀಗೆ ಹಲವಾರು ಸೇವೆಗಳನ್ನು ನಾವು ಒದಗಿಸುತ್ತೇವೆ. ನಿಯಮಿತ ತಪಾಸಣೆ ಮಾಡಿಸಿಕೊಂಡರೆ ಕಣ್ಣಿನ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮುರಳೀಧರ ವೈ.ಕೆ. ಅವರು ಮಾತನಾಡಿ ಅಶ್ವಿನಿ ಆಸ್ಪತ್ರೆಯ ಉದ್ದೇಶ ಸದಾ ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ, ಸುಲಭ ಮತ್ತು ಕೈಗೆಟುಕುವ ಆರೋಗ್ಯ ಸೇವೆ ಒದಗಿಸುವುದು. ಕಣ್ಣಿನ ವಿಭಾಗ ಪ್ರಾರಂಭಿಸುವ ಮೂಲಕ ನಾವು ಆರೋಗ್ಯ ಸೇವೆಯನ್ನು ಇನ್ನಷ್ಟು ವಿಸ್ತರಿಸಿದ್ದೇವೆ. ಜನರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ, ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಹಾಯಕ ವೈದ್ಯಕೀಯ ನಿರ್ದೇಶಕರಾದ ಡಾ.ಸುಧಾ ಮತ್ತು ಡಾ. ಶಮಂತ್ ವೈ.ಕೆ., ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಹಾಜರಿದ್ದರು.

ಆಸ್ಪತ್ರೆ ಆಡಳಿತದಿಂದ ತಿಳಿಸಿರುವಂತೆ, ಮುಂದಿನ ದಿನಗಳಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರ ಮಧ್ಯಾಹ್ನ 1ರಿಂದ 3ರವರೆಗೆ ಕಣ್ಣಿನ ತಜ್ಞರ ಸೇವೆ ಲಭ್ಯವಿರಲಿದೆ. ಸ್ಥಳೀಯರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಆಸ್ಪತ್ರೆ ಮನವಿ ಮಾಡಿದೆ.

  •  

Leave a Reply

error: Content is protected !!