

ನೆಲ್ಯಾಡಿ: ಜನರ ಆರೋಗ್ಯ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿ, ಆಂಬ್ಯುಲೆನ್ಸ್ ಸೇವೆ ಒದಗಿಸಬೇಕು ಎಂದು ಆರೋಗ್ಯ ಇಲಾಖೆ 108 ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದರೆ ಆಂಬ್ಯುಲೆನ್ಸ್ ನಿರ್ವಹಣೆಯಲ್ಲಿ 108 ಸಮಸ್ಯೆ ಇದ್ದು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸುವ ವಾಹನವೇ ಈಗ ಅನಾರೋಗ್ಯಕ್ಕೆ ತುತ್ತಾಗಿದೆ.

ಕಡಬ ತಾಲೂಕಿನ ಶಿರಾಡಿಯಲ್ಲಿ ಸುಸಜ್ಜಿತ ಸರಕಾರಿ ಆಸ್ಪತ್ರೆ ಕಟ್ಟಡ ಮಾತ್ರ ವಿದ್ದು, ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇರುವ ಮೂಲಸೌಕರ್ಯ ಗಳನ್ನು ಬಳಸಿಕೊಂಡು ಇಲ್ಲಿನ ವೈದ್ಯಾಧಿಕಾರಿಗಳು, ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದಾರೆ. ಜನರ ತುರ್ತು ಆರೋಗ್ಯ ಸಮಸ್ಯೆಗೆ ತಕ್ಷಣ ಸ್ಪಂದಿಸಿ ಸೇವೆ ನೀಡಬೇಕೆಂದು ಸರ್ಕಾರವೇ ಕೋಟ್ಯಾಂತರ ವೆಚ್ಚ ಮಾಡಿ 108 ಆಂಬ್ಯುಲೆನ್ಸ್ ವ್ಯವಸ್ಥೆ ಜಾರಿಗೆ ತಂದಿತ್ತು. ಆದರೆ ಇದೀಗ ಈ ಆಸ್ಪತ್ರೆಯಲ್ಲಿ ಇರುವ ಆಂಬ್ಯುಲೆನ್ಸ್ ವಾಹನದ 4 ಟಯರ್‌ಗಳು ಸವೆದು ಹೋಗಿ ಪಂಚರ್ ಆಗಿ ವಾಹನ ಮೂಲೆಗೆ ಬಿದ್ದು ತುಕ್ಕು ಹಿಡಿಯುತ್ತಿದೆ. ಜನಸೇವೆಗೆ ಲಭ್ಯವಿಲ್ಲ, ಇದನ್ನು ಸರಿಪಡಿಸುವ ಗೋಜಿಗೆ ಆರೋಗ್ಯ ಅಧಿಕಾರಿಗಳು ಇನ್ನೂ ಮನಸ್ಸು ಮಾಡಿಲ್ಲ. 108 ಆಂಬ್ಯುಲೆನ್ಸ್ ನಿರ್ವಹಣೆ ಮಾಡುತ್ತಿರುವ ಜಿವಿಕೆ ಸಂಸ್ಥೆ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಒಂದು ತಿಂಗಳಿಂದ ಸೇವೆ ನಿಲುಗಡೆ – ಇಬ್ಬರ ಸಾವು!
ಸುಮಾರು ಒಂದು ತಿಂಗಳಿಂದಿಚೆಗೆ ಸಮರ್ಪಕವಾಗಿ ಆಂಬ್ಯುಲೆನ್ಸ್ ಸೇವೆ ರೋಗಿಗಳಿಗೆ ಸಿಗುತ್ತಿಲ್ಲ, ಇದರಿಂದ ಕ್ಲಪ್ತ ಸಮಯದಲ್ಲಿ ರೋಗಿಗಳನ್ನ ಆಸ್ಪತ್ರೆಗೆ ಸಾಗಿಸಲಾಗದೆ ಕಳೆದ ಒಂದು ವಾರದ ಹಿಂದೆ ಪೀಡಿತನೊಬ್ಬ ಆಕ್ಸಿಜನ್ ಕೊರತೆಯಿಂದ ಉಸಿರಾಟ ನಿಲ್ಲಿಸಿ ಸಾವನ್ನಪ್ಪಿದ ಘಟನೆ ನಡೆದಿದೆ ಅಲ್ಲದೆ ಹೃದಯಾಘಾತಕ್ಕೊಳಗಾದ ಮತ್ತೊಬ್ಬರೂ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗದೆ ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ಇಲ್ಲದ ಕಾರಣ ಜೀವ ಕಳೆದುಕೊಂಡವರ ಸಂಖ್ಯೆ ಇನ್ನೂ ಹೆಚ್ಚಾದರೆ ಇದರ ಹೊಣೆ ಯಾರು? ಎಂದು ಸ್ಥಳೀಯರು ದೂರುತ್ತಿದ್ದಾರೆ.
ಘಾಟಿ ಪ್ರದೇಶಕ್ಕೆ ಒಂದೇ ಆಂಬ್ಯುಲೆನ್ಸ್:
ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯ ಭಾಗವು ಅಪಘಾತಗಳಿಗೆ ಪ್ರಸಿದ್ಧ. ಇಲ್ಲಿ ಪ್ರತಿದಿನ ರಸ್ತೆಯಲ್ಲಿ ಅಪಘಾತ ಸಂಖ್ಯೆ ಅತೀ ಹೆಚ್ಚಾಗಿ ನಡೆಯುತ್ತವೆ. ಆದರೆ ಈ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಆಂಬ್ಯುಲೆನ್ಸ್ ಒಂದೇ ಅದು ಕೂಡ ಈಗ ಕಾರ್ಯನಿರ್ವಹಣೆ ನಿಲ್ಲಿಸಿದೆ. ಸುಮಾರು 10 ರಿಂದ 20 ಕಿ.ಮಿ. ವ್ಯಾಪ್ತಿಯ ಒಳಗೆ ಇನ್ನೊಂದು ಸರ್ಕಾರಿ ಆಂಬ್ಯುಲೆನ್ಸ್ ಲಭ್ಯವಿಲ್ಲ. ಗ್ರಾಮೀಣ ಪ್ರದೇಶವಾಗಿರುವುದರಿಂದ ಖಾಸಗಿ ಆಂಬ್ಯುಲೆನ್ಸ್ ಲಭ್ಯತೆ ತೀರಾ ವಿರಳವಾಗಿದೆ. ಒಂದು ವೇಳೆ ಖಾಸಗಿ ಆಂಬುಲೆನ್ಸ್ ಮೊರೆ ಹೋದಲ್ಲಿ ಬಡವರಿಗೆ ದುಬಾರಿಯಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶಿರಾಡಿ ವಾಹನವೇ ಜನರಿಗೆ ಏಕೈಕ ಆಧಾರವಾಗಿತ್ತು. ಆದರೆ ಅದನ್ನು ನಿರ್ಲಕ್ಷಿಸಿ ನಿಲ್ಲಿಸಿರುವುದು ಆರೋಗ್ಯ ಇಲಾಖೆಯ ಬೆಂಬಲವಿಲ್ಲದ ನೀತಿಯನ್ನು ಬಯಲಾಗಿಸುತ್ತಿದೆ.
ಆಂಬ್ಯುಲೆನ್ಸ್‌ನ ಟಯರ್‌ಗಳು ಸವೆದು ಹೋಗಿವೆ. ಆದರೆ, ವಾಹನ ನಿರ್ವಹಣೆ ಶಿರಾಡಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿಲ್ಲ. ಈ ವಿಷಯವನ್ನು ಜಿಲ್ಲಾ ಆರೋಗ್ಯಾಧಿಕಾರಿಗಳ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಇದು ದುರಸ್ತಿಯಾಗಲಿದೆ ಎಂಬ ಮಾಹಿತಿ ಬಂದಿದೆ.
-ಡಾ.ಚಂದ್ರಶೇಖರ, ಆರೋಗ್ಯಾಧಿಕಾರಿ, ಶಿರಾಡಿ ಆಸ್ಪತ್ರೆ
ಒಂದು ತಿಂಗಳಿನಿಂದ ಆಂಬ್ಯುಲೆನ್ಸ್ ನಿಲ್ಲಿಸಿ ಜನರನ್ನು ಕಷ್ಟಕ್ಕೆ ದೂಡಲಾಗಿದೆ. ಕೇವಲ ಟಯರ್ ಹಾಳಾಗಿದೆ ಎಂಬ ನೆಪದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ ವಾಹನವನ್ನು ಹಾಳಾಗಲು ಬಿಟ್ಟಿರುವುದು ಅಧಿಕಾರಿಗಳ ಸ್ಪಷ್ಟ ಬೇಜವಾಬ್ದಾರಿ. ಶಿರಾಡಿ ಘಾಟಿಯಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ. ಜನರ ಜೀವ ಹೋಗುತ್ತಿದ್ದರೂ ಆರೋಗ್ಯ ಇಲಾಖೆ ಮೌನವಾಗಿದೆ. ಈ ನಿರ್ಲಕ್ಷ್ಯ ಮುಂದುವರಿದರೆ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಉಗ್ರ ಹೋರಾಟಕ್ಕೆ ಮುಂದಾಗಲಿದೆ. ತಕ್ಷಣ ಕ್ರಮ ಕೈಗೊಂಡು ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಬೇಕು.
-ಕಿಶೋರ್ ಶಿರಾಡಿ, ಸಂಚಾಲಕ, ಮಲೆನಾಡು ಜನಹಿತ ರಕ್ಷಣಾ ವೇದಿಕೆ, ದ.ಕ.
ನನ್ನ ಗಮನಕ್ಕೆ ಬಂದ ತಕ್ಷಣವೇ ಆಂಬ್ಯುಲೆನ್ಸ್‌ಗೆ ಟಯರ್ ಅಳವಡಿಸುವ ಸಂಬಂಧ ಟೆಂಡರ್ ಕರೆಯಲಾಗಿದ್ದು, ಅದರ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಆದಷ್ಟು ಬೇಗ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿ, ಸೇವೆಯನ್ನು ಪುನರಾರಂಭಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
-ಡಾ.ತಿಮ್ಮಯ್ಯ ಎಚ್.ಆರ್., ಜಿಲ್ಲಾ ಆರೋಗ್ಯಾಧಿಕಾರಿ ಮಂಗಳೂರು






