ನೆಲ್ಯಾಡಿ ಸಂತ ಚಾರ್ಜ್ ವಿದ್ಯಾ ಸಂಸ್ಥೆಯ ದಿಟ್ಟ ಹೆಜ್ಜೆ— ಪರಿಸರದಲ್ಲಿ ಮೆಚ್ಚುಗೆ, ಸಮಾಜದಲ್ಲಿ ಹೊಸ ಆಶಾಕಿರಣ


ನೆಲ್ಯಾಡಿ: ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಕೇವಲ ಒಂದು ಸಾಮಾಜಿಕ ಸೇವಾ ಘಟಕವಲ್ಲ, ಅದು ಯುವಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಶಾಲಿ ವೇದಿಕೆ. ನೆಲ್ಯಾಡಿಯ ಸಂತ ಚಾರ್ಜ್ ವಿದ್ಯಾ ಸಂಸ್ಥೆಯ ಸ್ವಯಂಸೇವಕರು ಆರಂಭಿಸಿರುವ ವಿಭಿನ್ನ ಅಭಿಯಾನ ಅದಕ್ಕೆ ತಾಜಾ ಸಾಕ್ಷಿ.
“ನಶಾಮುಕ್ತ ಭಾರತ ಅಭಿಯಾನ” ಎಂಬ ಶೀರ್ಷಿಕೆಯಲ್ಲಿ, ನೂಜಿಬಾಳ್ತಿಲ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ, ಸ್ವಯಂಸೇವಕರು “ಮನೆಯೊಳಗೆ ಮನದ ಮಾತು” ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಮನೆ ಮನೆಗೆ ಭೇಟಿ ನೀಡಿ, ಜನರೊಂದಿಗೆ ನೇರವಾಗಿ ಮಾತನಾಡಿ, ನಶಾಮುಕ್ತಿ ಕುರಿತು ಜಾಗೃತಿ ಮೂಡಿಸುವ ನೂತನ ಪ್ರಯತ್ನವನ್ನು ಕೈಗೊಂಡಿದ್ದಾರೆ.
ಮನೆ ಬಾಗಿಲಲ್ಲಿ ನಿಂತ ಎನ್ನೆಸ್ಸೆಸ್ ಜಾಗೃತಿ ತಂಡ:
ಸಾಮಾನ್ಯವಾಗಿ ಜಾಗೃತಿ ಅಭಿಯಾನವೆಂದರೆ ವೇದಿಕೆಯ ಮೇಲೆ ಭಾಷಣ, ಮೈಕ್ ಹಿಡಿದು ಘೋಷಣೆ. ಆದರೆ ಇಲ್ಲಿ ಹಾಗಿಲ್ಲ ಶಿಬಿರಾರ್ಥಿಗಳು ನೂಜಿಬಾಳ್ತಿಲ ಗ್ರಾಮದ ಸುತ್ತಮುತ್ತಲಿನ ಮನೆಗಳಿಗೆ ತೆರಳಿ, ಮನೆಯವರೊಂದಿಗೆ ಕುಳಿತು ಮುಕ್ತ ಸಂವಾದ ನಡೆಸಿದರು. ಅಲ್ಲಿ ಇದ್ದ ಕುಟುಂಬಸ್ಥರೊಂದಿಗೆ ಮಕ್ಕಳು ಪುಸ್ತಕ ಹಿಡಿದು ಓದಿದಂತೆ, ಪ್ರಶ್ನೋತ್ತರ ಪತ್ರಿಕೆ ಹಿಡಿದು ಕುಟುಂಬದೊಂದಿಗೆ ಮಾತನಾಡಿದರು. “ಮದ್ಯ ಸೇವನೆ ಮಾಡುತ್ತೀರಾ? ನಿಮ್ಮ ಮನೆಗೆ ವ್ಯಸನದ ಸಮಸ್ಯೆ ಇದೆಯಾ? ಮಕ್ಕಳಿಗೆ ಏನು ಬೋಧಿಸುತ್ತೀರಿ? ಅವರ ಜೀವನ ಶೈಲಿ, ಶಿಕ್ಷಣ, ಮಕ್ಕಳ ಭವಿಷ್ಯ ಹಾಗೂ ವ್ಯಸನದ ಹಾನಿಕಾರಕ ಪರಿಣಾಮಗಳ ಬಗ್ಗೆ ಚರ್ಚೆ, ನೇರ ಪ್ರಶ್ನೆಗಳು ಬಾಗಿಲಿನ ಅಂಗಳದಲ್ಲೇ ಕೇಳಿಬಂದವು.
ಸಮಾಜದಲ್ಲಿ ಮದ್ಯ, ಗಾಂಜಾ, ಜುಗಾರಿ ಮುಂತಾದ ವ್ಯಸನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವಾಗ, ಯುವ ಸ್ವಯಂಸೇವಕರು ಕೈಗೊಂಡ ಈ ಅಭಿಯಾನ ಹೊಸ ಹಾದಿಯ ಪ್ರಯೋಗವಾಗಿದೆ. “ಮನೆಗೆ ಬಂದು ಮಾತಾಡಿದಾಗ ನಾವು ತಕ್ಷಣ ಸ್ಪಂದಿಸುತ್ತೇವೆ. ಹೊರಗಿನ ಸಮ್ಮೇಳನ, ಜಾಗೃತಿ ಕಾರ್ಯಕ್ರಮಗಳಲ್ಲಿ ಅಷ್ಟು ಕಿವಿಗೊಡದಿದ್ದರೂ, ನಮ್ಮ ಮನೆಯ ಬಾಗಿಲಲ್ಲೇ ವಿದ್ಯಾರ್ಥಿಗಳು ಕುಳಿತು ಮಾತನಾಡಿದರೆ ಅದು ಹೃದಯಕ್ಕೆ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದರು.
ನೆಲ್ಯಾಡಿಯ ಸಂತ ಚಾರ್ಜ್ ವಿದ್ಯಾ ಸಂಸ್ಥೆಯ ಸ್ವಯಂಸೇವಕರ ಈ ಪ್ರಯೋಗಾತ್ಮಕ ಅಭಿಯಾನವು ಕೇವಲ ಎನ್ನೆಸ್ಸೆಸ್ ಶಿಬಿರದ ಒಂದು ಅಂಗವಲ್ಲ, ಇದು ಸಮಾಜ ಬದಲಾವಣೆಗಾಗಿ ಯುವ ಶಕ್ತಿಯ ಹೋರಾಟ. ನೂಜಿಬಾಳ್ತಿಲದಲ್ಲಿ ಮೊಳಕೆಯೊಡೆಯುತ್ತಿರುವ ಈ ಬದಲಾವಣೆಯ ಬೀಜವು, ಇನ್ನಷ್ಟು ಗ್ರಾಮಗಳಲ್ಲಿ ಹರಡಿ, ವ್ಯಸನಮುಕ್ತ ಸಮಾಜ ಕಟ್ಟುವ ದಾರಿಯಲ್ಲಿನ ಮಹತ್ವದ ಹೆಜ್ಜೆಯಾಗಲಿದೆ.
ಸಮಾಜದಲ್ಲಿ ಬದಲಾವಣೆ ತರಲು ಯುವ ಶಕ್ತಿ
ಇಂತಹ ಕ್ಯಾಂಪ್ಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ಸಮಸ್ಯೆ ಅರಿವು, ನಾಯಕತ್ವ ಹಾಗೂ ಸೇವಾ ಮನೋಭಾವವನ್ನು ಬೆಳೆಸುತ್ತವೆ. ಮನೆ ಮನೆಗೆ ತೆರಳಿ ಜನರೊಂದಿಗೆ ನೇರವಾಗಿ ಮಾತನಾಡುವುದು ಅತಿ ಕಷ್ಟದ ಕೆಲಸ. ಆದರೆ, ಯುವಕರು ಅದನ್ನು ನಗುನಗುತ್ತಾ ನಿರ್ವಹಿಸುತ್ತಿರುವುದು ಸಮಾಜದಲ್ಲಿ ಹೊಸ ಆಶಾವಾದ ಮೂಡಿಸಿದೆ.
ಕೆಲವರು ಬೆರಗಾದರು, ಕೆಲವರು ನಾಚಿಕೊಂಡರು, ಕೆಲವರು ತಲೆ ತಗ್ಗಿಸಿದರು. ಆದರೆ ಪ್ರಾಮಾಣಿಕ ಮುಖದ ಮುಂದೆ ಯಾರೂ ಸುಳ್ಳು ಹೇಳಲು ಸಾಧ್ಯವಾಗಲಿಲ್ಲ, ನಾವು ವಿದ್ಯಾರ್ಥಿಗಳೆಂದು ತಿಳಿದ ಕೂಡಲೇ ಮನಬಿಚ್ಚಿ ಮಾತನಾಡಿದರು. ಮದ್ಯಪಾನವು ಮನೆಗಳನ್ನು ಹಾಳುಮಾಡುತ್ತಿರುವ ಕಥೆಗಳನ್ನು ಕೇಳಿ ಕಣ್ಣೀರು ಬಂತು. ಇಂತಹ ಸಮೀಕ್ಷೆ ನಮ್ಮೆಲ್ಲರಿಗೂ ಒಂದು ಜೀವನ ಪಾಠ
-ಅನುಷಾ ಶಿಬಿರಾರ್ಥಿನಿ(ಪಿಯುಸಿ ವಿದ್ಯಾರ್ಥಿನಿ)
ಇಂದು ಮಕ್ಕಳು ನಮ್ಮ ಮನೆಗೆ ಬಂದು ನಮಗೆ ಬೋಧನೆ ಮಾಡುತ್ತಿದ್ದಾರೆ. ನಾವು ಹಳೆಯವರು, ನಮ್ಮ ಕಾಲದಲ್ಲಿ ಇಂತಹ ಶಿಬಿರ ಇರಲಿಲ್ಲ. ಈಗ ಸಮಾಜದ ಸಮಸ್ಯೆಯನ್ನು ಬದಲಾಯಿಸಲು ಈ ಕಿರಿಯರ ಶ್ರಮ ನೋಡಿದಾಗ ನಮಗೆ ನಿಜವಾಗಿಯೂ ಭರವಸೆ ಬರುತ್ತದೆ. ನಮ್ಮ ಗ್ರಾಮದಲ್ಲಿ ಮದ್ಯಪಾನವು ದೊಡ್ಡ ಕಂಟಕವಾಗಿದೆ. ಮಕ್ಕಳ ಜಾಗೃತಿ ಅಭಿಯಾನದಿಂದ ಕೆಲವರು ಬದಲಾವಣೆಯಾಗುತ್ತಾರೆ ಎನ್ನುವ ನಂಬಿಕೆ ಇದೆ
-ಚಂದ್ರಾವತಿ, ಅಧ್ಯಕ್ಷೆ ಗ್ರಾಮ ಪಂಚಾಯಿತಿ, ನೂಜಿಬಾಳ್ತಿಲ
ಈ ಶಿಬಿರ ಕೇವಲ ದಿನಚರಿಯ ಕಾರ್ಯಕ್ರಮವಲ್ಲ. ನಮ್ಮ ಉದ್ದೇಶವೇ ವಿದ್ಯಾರ್ಥಿಗಳು ಸಮಾಜದ ಹೃದಯಕ್ಕೆ ಹೋಗಬೇಕು. ಪುಸ್ತಕದಲ್ಲಿ ಕಲಿತದ್ದನ್ನು ಬದುಕಿನಲ್ಲಿ ಅಳವಡಿಸಬೇಕು. ‘ಮನೆಯೊಳಗೆ ಮನದ ಮಾತು’ ಅಭಿಯಾನವು ವಿದ್ಯಾರ್ಥಿಗಳ ಧೈರ್ಯವನ್ನು ಹೆಚ್ಚಿಸಿದೆ. ಜನರೊಂದಿಗೆ ನೇರ ಸಂವಾದ ನಡೆಸಿದ ಅನುಭವ ಅವರಿಗೆ ಮುಂದಿನ ಜೀವನದಲ್ಲೂ ಪಾಠವಾಗಲಿದೆ. ವ್ಯಸನದಿಂದ ಮುಕ್ತ ಸಮಾಜ ಕಟ್ಟುವ ದಾರಿಯಲ್ಲಿ ವಿದ್ಯಾರ್ಥಿಗಳು ಬಿತ್ತುತ್ತಿರುವ ಬಿತ್ತನೆ ನಾಳೆ ಫಲ ನೀಡುತ್ತದೆ.
-ವಿಶ್ವನಾಥ ಶೆಟ್ಟಿ ಕೆ.,ಶಿಬಿರಾಧಿಕಾರಿ






