ಜಾನುವಾರು ಹತ್ಯೆ ಪ್ರಕರಣ:ಆರೋಪಿಯ ಮನೆ, ಅಕ್ರಮ ಕಸಾಯಿಖಾನೆ ಜಪ್ತಿ

ಶೇರ್ ಮಾಡಿ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಹಸನಬ್ಬ ಎಂಬಾತನ ವಿರುದ್ಧ ಗೋ ಕಳವು ಹಾಗೂ ಗೋವಧೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವ ಭಾಗವಾಗಿ, ಅಧಿಕಾರಿಗಳು ಇವನ ಮನೆ ಹಾಗೂ ಅಕ್ರಮ ಕಸಾಯಿಖಾನೆಯನ್ನು ಜಪ್ತಿ ಮಾಡಿದ್ದಾರೆ.

ಹಸನಬ್ಬನ ವಿರುದ್ಧ ಠಾಣಾ ಅಕ್ರ 123/2025ರಲ್ಲಿ ಕಲಂ 303 ಬಿಎನ್‌ಎಸ್, ಗೋಸಂರಕ್ಷಣಾ ಕಾಯಿದೆ 4,7,12 ಹಾಗೂ ಗೋಹತ್ಯೆ ನಿಷೇಧ ಕಾಯಿದೆ 11(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದಲ್ಲದೆ 2017 ಹಾಗೂ 2018ರಲ್ಲಿ ಸಹ ಗೋ ಕಳವು ಹಾಗೂ ಗೋವಧೆ ಪ್ರಕರಣಗಳಲ್ಲಿ ಅವನ ವಿರುದ್ಧ ದೂರು ದಾಖಲಾಗಿದ್ದವು.

ಯಾವುದೇ ಪರವಾನಿಗೆ ಇಲ್ಲದೇ ಮನೆಯಲ್ಲಿಯೇ ಅಕ್ರಮವಾಗಿ ಕಸಾಯಿಖಾನೆ ನಿರ್ಮಿಸಿಕೊಂಡು, ಕಳವು ಮಾಡಿದ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಇದನ್ನು ಆಧರಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಕಲಂ 8(4), 8(5) ಅನ್ವಯ ಕ್ರಮ ಕೈಗೊಂಡಿದ್ದಾರೆ.

ಅದರಂತೆ, ಪುದು ಗ್ರಾಮದ ಮಾರಿಪಳ್ಳ ಪಾಡಿ, ಮನೆ ನಂ. 6-54 ಮತ್ತು 6-54(1) ಅನ್ನು 25/09/2025ರ ಆದೇಶದಂತೆ ಜಪ್ತಿ ಮಾಡಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣದಲ್ಲಿ ಆರೋಪಿಯ ಮನೆ / ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಮಾಡಿರುವುದು ಇದೇ ಮೊದಲ ಬಾರಿಗೆ ನಡೆದಿದೆ.

  •  

Leave a Reply

error: Content is protected !!