ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ

ಶೇರ್ ಮಾಡಿ

ಕೊಯಿಲ: ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ದ.ಕ. ಜಿ.ಪಂ. ಉ.ಹಿ. ಪ್ರಾ.ಶಾಲೆ, ಕೊಯಿಲದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಭವಾನಿಶಂಕರ್ ಪರಂಗಾಜೆ ಅವರು ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸುತ್ತದೆ. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಸಹೋದರತೆ, ತ್ಯಾಗ, ನಾಯಕತ್ವ ಹಾಗೂ ಸಮಾಜದೊಂದಿಗೆ ಬೆರೆಯುವ ಗುಣಗಳು ಮೂಡಿ ಬರುತ್ತವೆ. ಈ ಶಿಬಿರವು ಖಂಡಿತವಾಗಿಯೂ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಲಂಕಾರು ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರೇಖಾ ಅವರು ಇಂದಿನ ಯುವ ಜನರು ದಾರಿ ತಪ್ಪುತ್ತಿರುವ ಕಾಲಘಟ್ಟದಲ್ಲಿ ಎನ್‌ಎಸ್‌ಎಸ್ ನಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಒಳ್ಳೆಯ ಜೀವನ ಪಾಠ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯನ್ನು ಮೂಡಿಸುತ್ತವೆ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ್ದ ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಬಿರ ನಿರ್ದೇಶಕ ಚಂದ್ರಶೇಖರ ಕೆ ಅವರು ಆಧುನಿಕತೆಯ ಪ್ರಭಾವದಲ್ಲಿ ಯುವಜನರು ಪರಿಸರ ಮತ್ತು ಕೃಷಿಯಿಂದ ದೂರವಾಗುತ್ತಿದ್ದಾರೆ. ಆದರೆ ಈ ಶಿಬಿರದ ಮೂಲಕ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪರಿಸರದತ್ತ ಆಕರ್ಷಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಶ್ಲಾಘನೀಯ ಎಂದು ಸಂತೋಷ ವ್ಯಕ್ತಪಡಿಸಿದರು.

ಶಿಬಿರಾಧಿಕಾರಿ ಕೀರ್ತನ್ ಶಿಬಿರ ವರದಿ ಮಂಡಿಸಿದರು. ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಶಿಬಿರಾಧಿಕಾರಿಗಳು ಹಾಗೂ ಶಿಬಿರ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿಶ್ವನಾಥ ಗೌಡ ಪುತ್ಯೆ ಅವರನ್ನು ಶಾಲಾ ಎಸ್.ಡಿ.ಎಂ.ಸಿ ಪರವಾಗಿ ಗೌರವಿಸಲಾಯಿತು.

ವೇದಿಕೆಯಲ್ಲಿ ಶಾಲೆಯ ಶತಮಾನೋತ್ಸವ ಸಮಿತಿ ಉಪಾಧ್ಯಕ್ಷ ಮಹೇಶ್ ಪೊಸಳಕ್ಕೆ, ಶಾಲಾ ಎಸ್.ಡಿ.ಎಂ.ಸಿ ಸದಸ್ಯ ದಯಾನಂದ ಪುಣಿಕೆತ್ತಡಿ, ಬಿ.ಎಂ.ಎಸ್. ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ವಸಂತಕುಮಾರ್ ಪೊಸಳಕ್ಕೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಸುಭಾಷ್ ಶೆಟ್ಟಿ, ಶಿಬಿರ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿಶ್ವನಾಥ ಗೌಡ ಪುತ್ಯೆ, ಶಿಬಿರ ನಾಯಕ ಲಿಖಿತ್ ರೈ ಹಾಗೂ ನಾಯಕಿ ರಕ್ಷಾ ಜೆ.ರೈ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ವಿದ್ಯಾರ್ಥಿನಿ ಶಹನಿ ಹಾಗೂ ಬಳಗದವರು ನೆರವೇರಿಸಿದರು. ಸಹ ಶಿಬಿರಾಧಿಕಾರಿ ಕು.ಅಕ್ಷತಾ ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ವಂದಿಸಿದರು. ಉಪನ್ಯಾಸಕ ಚೇತನ್ ಮೊಗ್ರಾಲ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಬಿರಾಧಿಕಾರಿಗಳಾದ ಶಿವಪ್ರಸಾದ್ ಹೊಳ್ಳ ಮತ್ತು ಕು.ಅಕ್ಷತಾ ಸಹಕರಿಸಿದರು.

  •  

Leave a Reply

error: Content is protected !!