

ನೆಲ್ಯಾಡಿ: ಪಡುಬೆಟ್ಟು ಸೌಹಾರ್ದ ಫ್ರೆಂಡ್ಸ್ ಕ್ಲಬ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಅ.2ರಂದು ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪಡುಬೆಟ್ಟು ಬಸ್ ತಂಗುದಾಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಕ್ಲಬ್ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಕ್ಲಬ್‌ನ ಗೌರವಾಧ್ಯಕ್ಷರಾದ ಮಹಾಲಿಂಗ ಕೆ ಅವರ ಮಾರ್ಗದರ್ಶನದಲ್ಲಿ ಗಾಂಧೀಜಿಯ ಸ್ವಚ್ಛತಾ ಆದರ್ಶಗಳನ್ನು ನೆನೆದು ಸ್ಥಳೀಯ ಸಾರ್ವಜನಿಕರಿಗೆ ಪ್ರೇರಣದಾಯಕವಾಗುವ ರೀತಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ಗಾಂಧೀಜಿ ದೇಶಕ್ಕೆ ಕೊಟ್ಟ ಅತ್ಯಂತ ದೊಡ್ಡ ಸಂದೇಶವೆಂದರೆ ಸ್ವಚ್ಛತೆ ಮತ್ತು ಶ್ರಮದಾನದ ಮಹತ್ವ. ಸೌಹಾರ್ದ ಫ್ರೆಂಡ್ಸ್ ಕ್ಲಬ್ ಯುವಕರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಇಂತಹ ಶ್ರಮದಾನಗಳು ಸಮಾಜದಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸುವಲ್ಲಿ ಸಹಕಾರಿ, ಮುಂದೆಯೂ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸುವಂತೆ ಹಾರೈಸಿದರು.
ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಪುಷ್ಪ ಪಡುಬೆಟ್ಟು, ಕ್ಲಬ್ ಅಧ್ಯಕ್ಷ ಹನೀಫ್ ಉಳಿತೊಟ್ಟು, ಕಾರ್ಯದರ್ಶಿ ಸಮೀರುದ್ದಿನ್ ಪಡುಬೆಟ್ಟು ಹಾಗೂ ಕ್ಲಬ್‌ನ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡರು.






