ಸರ್ಕಾರಿ ಅರಣ್ಯ ಭೂಮಿ ಅಕ್ರಮ ಒತ್ತುವರಿ – ಹೈಕೋರ್ಟ್ ಆದೇಶದ ಹಿನ್ನೆಲೆ ಅರಣ್ಯ ಇಲಾಖೆ ಸ್ವಾಧೀನ

ಶೇರ್ ಮಾಡಿ

ಕೊಕ್ಕಡ: ಸರ್ಕಾರಿ ಅರಣ್ಯ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಕೃಷಿಯನ್ನು ಮಾಡಿದ ಪ್ರಕರಣದಲ್ಲಿ ಅಧಿಕಾರಿಗಳ 22 ವರ್ಷಗಳ ನಿರ್ಲಕ್ಷ್ಯಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಅಂತಿಮ ಆದೇಶ ಹೊರಡಿಸಲೇಬೇಕು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ಅರಣ್ಯ ಇಲಾಖೆ ತಂಡವು ಸ್ಥಳಕ್ಕೆ ದಾಳಿ ನಡೆಸಿ ಆಕ್ರಮಿತ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿದೆ.

ಪ್ರಕರಣದ ಹಿನ್ನೆಲೆ:
ಬೆಳ್ತಂಗಡಿ ತಾಲೂಕು, ಕೊಕ್ಕಡ ಹೋಬಳಿ, ಶಿಬಾಜೆ ಗ್ರಾಮದ ಅರಣ್ಯದ ವಿಸ್ತರಿತ ಬ್ಲಾಕ್, 1963ರ ಅರಣ್ಯ ಪ್ರದೇಶದ ಅರಂಪಾದೆ ಎಂಬಲ್ಲಿ ಸರ್ವೇ ನಂ.184/1ಸಿ, 1.9 ಎಕರೆ ಸರ್ಕಾರಿ ಭೂಮಿಯಲ್ಲಿ ಓ.ಪಿ. ಜಾರ್ಜ್(50) ಅಕ್ರಮವಾಗಿ ಆಕ್ರಮಿಸಿಕೊಂಡು ಕಟ್ಟಡ ಮತ್ತು ರಬ್ಬರ್ ತೋಟ ಬೆಳೆಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ನಿವಾಸಿ ಅಶೋಕ್ ಆಚಾರ್ಯ(41) ಅವರು *ಜನಹಿತ ಅರ್ಜಿ ಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದರು. “ಅಕ್ರಮ ಆಕ್ರಮಣದ ಬಗ್ಗೆ ನಾವು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ” ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ನ್ಯಾಯಾಲಯದ ಆಕ್ರೋಶ:
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ ಅವರು ಅಧಿಕಾರಿಗಳ 22 ವರ್ಷಗಳ ಅಸಡ್ಡೆ ಶೈಲಿಯನ್ನು ಖಂಡಿಸಿದರು. ಈ ಪ್ರಕರಣದಲ್ಲಿ ಕ್ರಮ 2002-03ರಲ್ಲಿ ಆರಂಭವಾಗಿದ್ದರೂ, ಇಂದಿನವರೆಗೂ ಅಧಿಕಾರಿಗಳು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದು ನೇರವಾಗಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇಂತಹ ಅಸಡ್ಡೆ ವರ್ತನೆ ಅಸಹ್ಯಕರ, ಖಂಡನೀಯ ಎಂದು ನ್ಯಾಯಾಲಯ ಗರಂ ಆಯಿತು.

ಅರಣ್ಯ ಇಲಾಖೆಯ ಮೆಮೊ:
ಪ್ರಕರಣ ಸಂಬಂಧಿಸಿದಂತೆ ಕನ್ನಡ ರಾಜ್ಯ ಅರಣ್ಯ ಕಾಯಿದೆ, 1963ರ ಕಲಂ 64-ಂ ಅಡಿಯಲ್ಲಿ ವಿಚಾರಣೆ ಆರಂಭಗೊಂಡಿತ್ತು. 2024ರ ಮಾರ್ಚ್ 15 ಹಾಗೂ ಜೂನ್ 15ರಂದು ಪ್ರತಿವಾದಿ ಓ.ಪಿ. ಜಾರ್ಜ್ ಅವರಿಗೆ ನೋಟಿಸ್ ನೀಡಿದ್ದರೂ ಅವರು ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಉಪವಿಭಾಗದ ಅರಣ್ಯಾಧಿಕಾರಿ ಹೈಕೋರ್ಟ್‌ಗೆ ಸಲ್ಲಿಸಿದ ಮೆಮೊದಲ್ಲಿ ವಿವರಿಸಿದ್ದರು.

ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶ:
ಪ್ರಸ್ತುತ ನೋಟಿಸ್ ನೀಡಿರುವುದರಿಂದ ವಿಚಾರಣೆಯನ್ನು ಇನ್ನಷ್ಟು ವಿಳಂಬಿಸದೆ, ಸಂಬಂಧಿತ ಅಧಿಕಾರಿಗಳು ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ಕಾನೂನು ಪ್ರಕಾರ ಅಂತಿಮ ಆದೇಶ ಹೊರಡಿಸಬೇಕು. ಈ ಅವಧಿಯಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಅಧಿಕಾರಿಗಳು ನ್ಯಾಯಾಲಯ ಅವಮಾನ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟ ಎಚ್ಚರಿಕೆ ನೀಡಿತು.

ಅರಣ್ಯ ಇಲಾಖೆ ದಾಳಿ – ಭೂಮಿ ಸ್ವಾಧೀನ:
ಹೈಕೋರ್ಟ್ ಆದೇಶದ ಬೆನ್ನಲ್ಲೇ ಶುಕ್ರವಾರದಂದು ಆಕ್ರಮಿತ ಸರ್ಕಾರಿ ಭೂಮಿಯಲ್ಲಿದ್ದ ರಬ್ಬರ್ ತೋಟವನ್ನು ತೆರವುಗೊಳಿಸಿ ಜಾಗವನ್ನು ಸ್ವಾಧೀನಕ್ಕೆ ಪಡೆಯುವ ಕಾರ್ಯಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪವಲಯ ಅರಣ್ಯಾಧಿಕಾರಿ ರಾಜೇಶ್, ಶಿವಾನಂದ ಆಚಾರ್ಯ, ಅರಣ್ಯ ಪಾಲಕ ಸುನಿಲ್ ನಾಯ್ಕ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ನೇತೃತ್ವದ ತಂಡ ತಂಡವು ಕಾರ್ಯಾಚರಣೆ ನಡೆಸಿದ್ದಾರೆ.

  •  

Leave a Reply

error: Content is protected !!