


ಬೆಳ್ತಂಗಡಿ: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆ.7ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂಬರುವ ದಿನಗಳಲ್ಲಿ ನಾಲ್ಕು ವಸತಿ ಶಾಲೆಗಳು ತೆರೆಯಲಿದೆ. ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿದ್ಯಾಭ್ಯಾಸ ನಡೆಸುತ್ತಿದ್ದು ಬೆಳ್ತಂಗಡಿ ಶಿಕ್ಷಣದ ಹಬ್ ಆಗುತ್ತಿದೆ. ಉತ್ತಮ ಸೌಲಭ್ಯ ಹಾಗೂ ಸುಜ್ಜಿತ ಕಟ್ಟಡಗಳನ್ನು ಒಳಗೊಂಡ ವಿದ್ಯಾರ್ಥಿ ನಿಲಯಗಳು ತಾಲೂಕಿನಲ್ಲಿದೆ. ವಿದ್ಯಾರ್ಥಿಗಳು ರಾಮಾಯಣ ಕಥಾನವನ್ನು ಓದಿ ಅದರಲ್ಲಿರುವ ನೀತಿಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಪ್ರಧಾನ ಭಾಷಣಗಾರ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ|ಯೋಗೀಶ್ ಕೈರೋಡಿ ಮಾತನಾಡಿ ರಾಮಯಣ ಮತ್ತು ಮಹಾಭಾರತ ಜೀವಂತವಾಗಿ ಇಂದಿಗೂ ಉಳಿದಿದೆ.ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣ ಹಲವಾರು ಕೃತಿಗಳಿಗೆ ಕಾರಣವಾಗಿದೆ ಅಂತಹ ರಾಮಾಯಣವನ್ನು ನಮ್ಮ ಸಮಯವನ್ನು ಬಿಡುವು ಮಾಡಿಕೊಂಡು ನಾವು ಓದಿಕೊಳ್ಳಬೇಕು.ಪುಸ್ತಕ ಜ್ಞಾನದೊಂದಿಗೆ ಹೊರ ಜಗತ್ತಿಗೆ ಜ್ಞಾನದ ಬೆಳಕನ್ನು ಕಾಣಬೇಕು. ಶ್ರೀ ರಾಮಚಂದ್ರನ ಪರಿಕಲ್ಪನೆಯಲ್ಲಿ ವಾಲ್ಮೀಕಿ ರಾಮಾಯಣ ಕೃತಿಯನ್ನು ರಚಿಸಿದರು. ನಮ್ಮ ಮಾತೃ ಭಾಷೆಯಾದ ತುಳು ಭಾಷೆಯಲ್ಲಿ ಮಂದಾರ ಕೇಶವ ಭಟ್ ರಚಿಸಿರುವ ಮಂದಾರ ರಾಮಾಯಣ ಓದಿರಿ, ರಾಮಾಯಣದ ಅನೇಕ ಪಾತ್ರಗಳು ಪ್ರಮುಖ ತ್ಯಾಗಗಳನ್ನು ಮಾಡಿದ್ದು ನಾವು ಕೂಡ ನಮ್ಮ ಬದುಕಿನೊಳಗೆ ಸಣ್ಣ ಪುಟ್ಟ ತ್ಯಾಗಳನ್ನು ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ ವಾಲ್ಮೀಕಿ ರಚಿಸಿದ ರಾಮಾಯಣದಿಂದ ಅನೇಕ ಮಂದಿ ಪ್ರೇರಿತರಾಗಿ ನಾನಾ ರಾಮಾಯಣವನ್ನು ರಚಿಸಿದ್ದಾರೆ. ನಾವು ವ್ಯಕ್ತಿ ಆಚರಣೆಗೆ ಒತ್ತು ನೀಡದೆ ವ್ಯಕ್ತಿತ್ವ ಆಚರಣೆಗೆ ಆದ್ಯತೆ ನೀಡಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಧನಂಜಯ್ ಎನ್.ಎಸ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಉಪಸ್ಥಿತರಿದ್ದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಫಲಿತಾಂಶ ಗಳಿಸಿದ ಏಳು ವಸತಿ ನಿಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಅವರನ್ನು ಗೌರವಿಸಲಾಯಿತು.
ಸಿಬ್ಬಂದಿ ಆಶಾ ಪೂರ್ಣಿಮಾ ಸನ್ಮಾನ ಪತ್ರ ವಾಚಿಸಿದರು. ಮುಂಡಾಜೆ ಮೋರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯೋಪಾಧ್ಯಾಯ ಮುರಳಿಧರ್ ಸ್ವಾಗತಿಸಿದರು.ವಸತಿ ನಿಲಯ ಮೇಲ್ವಿಚಾರಕರಾದ ಡಾ| ಅರ್ಷಿಯಾ ವಂದಿಸಿ ಹಾಗೂ ಹೇಮಲತಾ ನಿರೂಪಿಸಿದರು.






