


ಕೊಕ್ಕಡ:ಶಿಬಾಜೆ ಇಲ್ಲಿಯ ಅರಂಪಾದೆ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ವಾಸವಿದ್ದ ಒ.ಪಿ.ಜಾರ್ಜ್ ಅವರ ರಬ್ಬರ್ ತೋಟವನ್ನು ಅರಣ್ಯ ಇಲಾಖೆ ತೆರವುಗೊಳಿಸಿದ ಹಿನ್ನೆಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಅ.6ರಂದು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬದವರನ್ನು ಭೇಟಿಯಾಗಿ ಅವರ ನೋವು ಹಂಚಿಕೊಂಡು ಸಮಾಧಾನದ ಮಾತುಗಳನ್ನಾಡಿದರು.
ಶಿಬಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ.184ರಲ್ಲಿ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಬಹುತೇಕರು ಕೃಷಿಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಏಕಾಏಕಿ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ಕೈಗೊಂಡಿರುವುದು ಜನರ ಜೀವನವೇ ಅಸ್ತವ್ಯಸ್ತಗೊಳಿಸುವಂತಾಗಿದೆ ಎಂದು ಸ್ಥಳೀಯರು ಶಾಸಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಕ್ರಿಯೆ ನೀಡಿದ ಶಾಸಕರಾದ ಹರೀಶ್ ಪೂಂಜಾ ನಾನು 184 ಸರ್ವೇ ನಂಬರಿನ ಎಲ್ಲ ಕುಟುಂಬಗಳ ಜೊತೆ ಇದ್ದೇನೆ. ನಿಮ್ಮಲ್ಲಿರುವ ದಾಖಲೆಗಳನ್ನು ಒಟ್ಟುಗೂಡಿಸಿ ಕಾನೂನು ಹೋರಾಟಕ್ಕೆ ಮುಂದಾಗಬೇಕು. ಹೈಕೋರ್ಟ್‌ನಿಂದ ಇಂಜಕ್ಷನ್ ಆದೇಶ ಪಡೆಯಲು ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ರತೀಶ್ ಬಿ, ನಿಕಟಪೂರ್ವ ಉಪಾಧ್ಯಕ್ಷ ವಿನಯಚಂದ್ರ ಟಿ, ಶಿಶಿಲ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಸಂದೀಪ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.






