


ನೆಲ್ಯಾಡಿ: ನೆಲ್ಯಾಡಿ ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘದ ಪ್ರಥಮ ವರುಷದ ವಾರ್ಷಿಕೋತ್ಸವ ಕಾರ್ಯಕ್ರಮ ಮಂಗಳವಾರ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ನೆಲ್ಯಾಡಿಯ ಹಿರಿಯ ಉದ್ಯಮಿ ಹಾಗೂ ಸುಬ್ರಹ್ಮಣ್ಯ ವಿಲಾಸ ಹೊಟೇಲ್ ಮಾಲಕ ಸುಬ್ರಹ್ಮಣ್ಯ ಆಚಾರ್ಯ ಅವರು ಉದ್ಘಾಟಿಸಿ ಮಹಿಳಾ ಕಲಾವಿದರಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ಆದಿತ್ಯ ಬಿ.ವಿ ಅವರು ಮಾತನಾಡಿ, ಯಕ್ಷಗಾನ ಎಂಬುದು ಗಂಡು ಕಲೆ ಎಂದು ಪ್ರಸಿದ್ಧಿ ಪಡೆದಿದ್ದರೂ, ಮಹಿಳೆಯರು ಈ ಕಲೆ ಕಲಿತು ಅದನ್ನು ಸಂರಕ್ಷಿಸುತ್ತಿರುವುದು, ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ‘ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘ’ ಕಳೆದ ಒಂದು ವರ್ಷದಲ್ಲಿ ಅನೇಕ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ಗೌರವ ಗಳಿಸಿದ್ದು, ಇಂದು ವಾರ್ಷಿಕೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘದ ಯಕ್ಷಗಾನ ಭಾಗವತರಾದ ಲಕ್ಷ್ಮೀನಾರಾಯಣ ಶೆಟ್ಟಿ ಕುಂದಡ್ಕ, ದೇವಾಲಯದ ಆಡಳಿತ ಸಮಿತಿಯ ಮೊಕ್ತೇಸರ ಸುಬ್ರಹ್ಮಣ್ಯ ಶಬರಾಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೆ.ಎಸ್., ದುರ್ಗಾ ಶ್ರೀ, ಜಯಾನಂದ ಬಂಟ್ರಿಯಾಲ್, ಮಹಾಬಲ ಶೆಟ್ಟಿ ದೋಂತಿಲ, ಶಿವಪ್ರಸಾದ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಮಹಾವಿಷ್ಣು ಭಜನಾ ಮಂಡಳಿ ಪಡುಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ. ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಸೇವೆ ನೆರವೇರಿಸಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ನೆಲ್ಯಾಡಿ ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘದ ಕಲಾವಿದರಿಂದ “ಬ್ರಹ್ಮತೇಜಸ್ಸು” ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಲೆ ಪ್ರದರ್ಶನ ನಡೆಯಿತು. ಯುವ ಭಾಗವತರಾದ ಧನಂಜಯ ಅವರ ಸುಮಧುರ ಹಾಡುಗಾರಿಕೆ, ಸುಂದರ ಗೌಡ ಮುಳಿತ್ತಡ್ಕ ಹಾಗೂ ವಿನ್ಯಾಸ್ ಬಂಟ್ರಿಯಾಲ್ ಅವರ ತಂಡದಿಂದ ಅತ್ಯುತ್ತಮವಾದ ನೃತ್ಯ–ನಾಟ್ಯ ಪ್ರದರ್ಶನ ನಡೆಯಿತು.
ಸನ್ಮಾನ:
ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಂಘದ ಬೆಳವಣಿಗೆಗೆ ಸಹಕಾರ ನೀಡಿದ ಕಲಾವಿದರಾದ ಸುಂದರ ಗೌಡ ಮುಳಿತ್ತಡ್ಕ, ವಿನ್ಯಾಸ್ ಬಂಟ್ರಿಯಾಲ್, ಭಾಗವತರಾದ ಲಕ್ಷ್ಮೀನಾರಾಯಣ ಶೆಟ್ಟಿ ಕುಂದಡ್ಕ, ಹಾಗು ಕಾರ್ಯಕ್ರಮದ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್ ಹಾಗೂ ಸುಚಿತ್ರಾ ಜೆ.ಬಂಟ್ರಿಯಾಲ್ ದಂಪತಿಗಳನ್ನು ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು, ಶ್ರೀ ಮಹಾವಿಷ್ಣು ಗೆಳೆಯರ ಬಳಗ, ಭಜನಾ ಮಂಡಳಿ, ಯಕ್ಷಗಾನ ಕಲಾ ಸಂಘದ ಸದಸ್ಯರು, ದಾನಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕೆ.ಎಸ್ ದುರ್ಗಾ ಶ್ರೀ ವಂದಿಸಿದರು.






