

ನೆಲ್ಯಾಡಿ: ಶಿರಾಡಿ ಗ್ರಾಮದ ಸಂಪ್ಯಾಡಿಯ ಪ್ರತಿಭಾವಂತ ಬಾಲನಟಿ, ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಅರ್ಚನಾ ಎಸ್. ಅವರು 2025ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ ನೆಹರು ಮೈದಾನದಲ್ಲಿ ನ.1ರಂದು ನಡೆದ 52ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ, ದ.ಕ. ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಗಣ್ಯರು ಉಪಸ್ಥಿತರಿದ್ದ ಸಂದರ್ಭದಲ್ಲಿ ಅರ್ಚನಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಡಬ ತಾಲೂಕಿನ ಶಿರಾಡಿ ಗ್ರಾಮದ ಸಂಪ್ಯಾಡಿಯ ಸುದರ್ಶನ್ ಕುಮಾರ್ ಮತ್ತು ರಮ್ಯಾ ದಂಪತಿಗಳ ಪುತ್ರಿಯಾದ ಅರ್ಚನಾ ಅವರು ಬಾಲ್ಯದಿಂದಲೇ ಅಪಾರ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಎರಡೂವರೆ ವಯಸ್ಸಿನಲ್ಲೇ ಶ್ರೀಕೃಷ್ಣ ವೇಷದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಬಳಿಕ ಭರತನಾಟ್ಯದಲ್ಲಿ ತರಬೇತಿ ಪಡೆದು ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು.
ಭರತನಾಟ್ಯದ ವಿವಿಧ ಶೈಲಿಗಳಲ್ಲಿ ತಮ್ಮದೇ ವಿಶಿಷ್ಟ ಗುರುತನ್ನು ಮೂಡಿಸಿರುವ ಅರ್ಚನಾ, ತಲೆಯಲ್ಲಿ ದೀಪ, ಮೊಳೆಸ್ಟಾಂಡ್, ಮಡಕೆ, ಗಾಜಿನ ಲೋಟದ ಮೇಲೆ ನಿಂತು ನೃತ್ಯ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಯೋಗಾಸನದಲ್ಲಿ “ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್” ಸಾಧನೆ ಮಾಡಿರುವ ಅವರು ಯೋಗದೊಂದಿಗೆ ದೀಪದ ನೃತ್ಯ ಪ್ರದರ್ಶನ ನೀಡುವುದರಲ್ಲಿ ವಿಶಿಷ್ಟತೆ ಹೊಂದಿದ್ದಾರೆ.
ಭರತನಾಟ್ಯ, ಯೋಗನೃತ್ಯ, ವೆಸ್ಟರ್ನ್ ನೃತ್ಯ, ಅರೆಶಾಸ್ತ್ರೀಯ, ಜಾನಪದ, ಯಕ್ಷನಾಟ್ಯ ಮತ್ತು ಕಥಕ್ ಶೈಲಿಗಳಲ್ಲಿ ಸುಮಾರು 700ಕ್ಕೂ ಹೆಚ್ಚು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಈ ಬಾಲಪ್ರತಿಭೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಮತ್ತು ಗೌರವ ಪಡೆದಿದ್ದಾರೆ.
ಎಲ್ಕೆಜಿಯಿಂದ 7ನೇ ತರಗತಿಯ ತನಕ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡಿದ ಅರ್ಚನಾ ಈಗ ನೆಲ್ಯಾಡಿ ಜ್ಞಾನೋದಯ ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೆ.






