

ಕೊಕ್ಕಡ: ಪಟ್ರಮೆ ಗ್ರಾಮದ ಪಟ್ಟೂರಿನಲ್ಲಿ ಕಾರಿನಲ್ಲಿ ಮೂರು ದನದ ಕರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಧರ್ಮಸ್ಥಳ ಠಾಣಾ ಪೊಲೀಸರು ಆರೋಪಿಗಳ ಮನೆಯನ್ನು ಮುಟ್ಟುಗೋಲು ಹಾಕಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಜೊಹಾರ (35) ಎಂಬವರ ಮನೆಯನ್ನು, ಅವರು ದನವನ್ನು ಖರೀದಿಸಿ ನಂತರ ಗೋಮಾಂಸಕ್ಕಾಗಿ ಇತರರಿಗೆ ಮಾರಾಟ ಮಾಡುತ್ತಿದ್ದರೆಂಬ ಆರೋಪದ ಹಿನ್ನೆಲೆ ಮೇಲೆ ಮುಟ್ಟುಗೋಲು ಹಾಕಲಾಗಿದೆ.
ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣಾ ಅಧಿಕಾರಿಗಳು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದ್ದು, ನ.6ರಂದು ಅವರ ಆದೇಶದಂತೆ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್. ಗಾಣಿಗೇರಾ ಅವರ ನೇತೃತ್ವದಲ್ಲಿ ಮನೆಯನ್ನು ಮುಟ್ಟುಗೋಲು ಹಾಕುವ ಕಾರ್ಯ ನಡೆದಿದೆ.






