

ಉಪ್ಪಿನಂಗಡಿ: ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ನೀಡಿ,ಆರೋಪಿಯೊಬ್ಬನಿಗೆ ಜಾಮೀನು ದೊರಕುವಂತೆ ವಂಚನೆ ನಡೆಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪುತ್ತೂರು ನಿವಾಸಿಯೊಬ್ಬರ ಮಾಲಿಕತ್ವದಲ್ಲಿರುವ ಜಮೀನಿನ ಆರ್ಟಿಸಿಯನ್ನು, ತನ್ನ ಹೆಸರಿನಲ್ಲಿರುವ ಜಮೀನು ದಾಖಲೆ ಎಂದೇ ನಂಬಿಸಿ, ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಮಂಗಳೂರು ಇವರ ಮುಂದೆ ನೀಡಿ, ಆರೋಪಿಗೆ ಜಾಮೀನು ನೀಡುವಂತೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ವೇಳೆ ನಕಲಿ ದಾಖಲೆ ಸೃಷ್ಟಿಸಿ, ತಾನು ಪಿರ್ಯಾದುದಾರನೆಂದು ಹೇಳಿಕೊಂಡು ನಕಲಿ ಸಹಿ ಮಾಡಿ ನ್ಯಾಯಾಲಯವನ್ನು ವಂಚಿಸುವ ಉದ್ದೇಶದಿಂದ ಬೆಲೆಬಾಳುವ ಭದ್ರತಾ ದಾಖಲೆ ಸಲ್ಲಿಸಿದ್ದ ಆರೋಪ ಸ್ಪಷ್ಟವಾಗಿದ್ದು, ಆರೋಪಿಯಾಗಿರುವ ಪುತ್ತೂರು ಪಡುವನ್ನೂರು ಗ್ರಾಮ ನಿವಾಸಿ ಅಬ್ದುಲ್ ಹಾಶೀಮ್ (34), ಎಂಬಾತನನ್ನು ಪೊಲೀಸರು ನ.6ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.






