

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಪಂನ ವಾಣಿಜ್ಯ ಸಂಕೀರ್ಣದ ಮೇಲ್ಬಾಗದಲ್ಲಿ 2012-13ರಲ್ಲಿ ಕಂದಾಯ ಇಲಾಖೆಯಿಂದ ಅಳವಡಿಸಲಾದ ಮಳೆ ಮಾಪನ ಯಂತ್ರಕ್ಕೆ ತಗಡಿನ ಶೀಟ್‌ನ ಚಾವಣಿ ಅಳವಡಿಸಿರುವುದು ಪಂಚಾಯಿತಿಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಮಳೆಯ ಮಾಹಿತಿಯೇ ಪ್ರಕೃತಿ ವಿಕೋಪ ನಿರ್ವಹಣೆಯ ಆಧಾರ. ನದಿ, ಕೆರೆಯ ತೀರದ ಜನರ ಸ್ಥಳಾಂತರ, ಬೆಳೆ ವಿಮೆ, ಅನಾವೃಷ್ಟಿ, ಅತಿವೃಷ್ಟಿ ನಿರ್ಧಾರ ನಿಖರವಾದ ಮಳೆಯ ಅಂಕಿ-ಅಂಶಗಳ ಮೇಲೆಯೇ ಅವಲಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಮಟ್ಟದಲ್ಲೇ ಮಳೆ ಮಾಪಕ ಅಳವಡಿಸುವ ಸರಕಾರದ ಯೋಜನೆ ರೈತರ ಪಾಲಿಗೆ ಆಧಾರವಾಗಿತ್ತು.
ಆದರೆ ಶಿಶಿಲದಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಯಂತ್ರವೇ ಈಗ ‘ಬಂಧಿ’ಯಾಗಿ ಚಾವಣಿಯ ಒಳಗೆ ಸಿಲುಕಿರುವುದು, ಮಳೆ ನೀರನ್ನು ಅಳೆಯಬೇಕಾದ ಯಂತ್ರಕ್ಕೆ ಮಳೆಯ ನೀರು ಬೀಳದ ಸ್ಥಿತಿಯಾಗಿದೆ.
ಈ ಹಿಂದೆ 15ರಿಂದ 50ಕಿ.ಮೀ. ದೂರದಲ್ಲಿದ್ದ ತಾಲೂಕು ಕೇಂದ್ರದ ಮಳೆ ದಾಖಲೆಗಳನ್ನು ಆಧಾರವಾಗಿಟ್ಟು ಬೆಳೆ ವಿಮೆ ಮಂಜೂರಾತಿ ನಡೆಯುತ್ತಿತ್ತು. ಇದರಿಂದ ಹಲವು ಬಾರಿ ರೈತರಿಗೆ ಅನ್ಯಾಯವಾಗಿತ್ತು. ಇದನ್ನು ಸರಿಪಡಿಸುವ ಸಲುವಾಗಿ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಿದ ಮಳೆ ಮಾಪಕ ಈಗ ಚಾವಣಿಯೊಳಗೆ ‘ಬಂಧಿ’ಯಾಗಿದೆ.
ಸ್ಥಳೀಯರ ಆಕ್ರೋಶ:
ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಿದ ಸಾಧನವನ್ನು ಪಂಚಾಯಿತಿ ತನ್ನ ತಪ್ಪಿನಿಂದ ಮಳೆ ಮಾಪನ ಕೇಂದ್ರಕ್ಕೆ ಚಾವಣಿ ನಿರ್ಮಿಸಿರುವುದು. ಅನರ್ಹಗೊಳಿಸಿದೆ ಎಂಬ ಆರೋಪ ಕೇಳಿಬರುತ್ತಿದೆ. ಶಿಶಿಲ ಗ್ರಾಪಂ ನಿರ್ಲಕ್ಷ್ಯ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಬೆಳೆ ವಿಮೆ ಹಾಗೂ ವಿಕೋಪ ನಿರ್ವಹಣೆಯ ಮೂಲ ಅಂಕಿ ಅಂಶಗಳೇ ಗಾಳಿಯಲ್ಲಿ ಹಾರಿ ಹೋಗುವ ಸಾಧ್ಯತೆ ಇದೆ. ತಕ್ಷಣ ಸರಿಪಡಿಸಿ ಮಳೆ ಮಾಪನ ವ್ಯವಸ್ಥೆ ಮರುಚೇತನಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯಿಂದ ತಾಲೂಕಿನಲ್ಲಿ ಅಳವಡಿಸಿರುವ ಮಳೆ ಮಾಪನ ಕೇಂದ್ರದ ಬಗ್ಗೆ ವಿವರ ನೀಡುವಂತೆ ಜೂನ್ ತಿಂಗಳಲ್ಲಿ ಪತ್ರ ಬರೆಯಲಾಗಿದೆ. ಯಾವುದೇ ಮಾಹಿತಿ ನೀಡಿಲ್ಲ. ಸರಕಾರದಿಂದ ದೊರೆತ ಉಪಕರಣಕ್ಕೆ ಶೀಟ್ ಅಳವಡಿಸಿರುವುದು ಸೂಕ್ತ ವ್ಯವಸ್ಥೆಯಲ್ಲ.
-ಕೆ.ಎನ್.ಚಂದ್ರಶೇಖರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಬೆಳ್ತಂಗಡಿ
ಮಳೆ ಮಾಪಕ ಯಂತ್ರದ ಮೇಲೆ ಶೀಟ್ ಅಳವಡಿಸಿರುವುದು ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ರಾಘವೇಂದ್ರ ಗೌಡ, ಪಂ. ಅಭಿವೃದ್ಧಿ ಅಧಿಕಾರಿ, ಶಿಶಿಲ
ರೈತರಿಗೆ ನ್ಯಾಯ ಸಿಗಲಿ ಅಂತ ಸರಕಾರ ಯೋಜನೆ ಜಾರಿಗೆ ತಂದಿದೆ. ಆದರೆ ಇಲ್ಲಿ ಯಂತ್ರವನ್ನೇ ಲಾಕ್ ಮಾಡಿರುವಂತೆ ಮಾಡಿಟ್ಟಿದ್ದಾರೆ. ಬೆಳೆ ವಿಮೆ ನಿರ್ಣಯದ ಮಹತ್ವದ ಅಂಕಿ ಅಂಶ ಇಲ್ಲಿಂದ ಸಿಗುವಂತಾಗಿದೆ. ಇದು ನೇರವಾಗಿ ರೈತರ ಮೇಲೆ ಮಾಡಿರುವ ಅನ್ಯಾಯ.
-ಸಂತೋಷ್ ಎ.ಎಸ್., ಗ್ರಾಮಸ್ಥರು, ಶಿಶಿಲ






