

ನೆಲ್ಯಾಡಿ: ನೆಲ್ಯಾಡಿ-ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಸಂಭ್ರಮ–2025 ಕಾರ್ಯಕ್ರಮ ಉದ್ಘಾಟನೆಯನ್ನು ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಾಲಯದಿಂದ ಕ್ರೀಡಾಪಟುಗಳು ಗೌರವಪೂರ್ವಕವಾಗಿ ಕ್ರೀಡಾಜ್ಯೋತಿಯನ್ನು ವಿದ್ಯಾಲಯಕ್ಕೆ ತಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜಸೇವಕ ಪುರುಷೋತ್ತಮ್ ದವಳಗಿರಿ ಅವರು ಕ್ರೀಡಾಜ್ಯೋತಿಯನ್ನು ಬೆಳಗಿಸಿ, ಧ್ವಜಾರೋಹಣ ನೆರವೇರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಮಕ್ಕಳು ಈಗಿನ ತಲೆಮಾರಿನಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆ ದೇಹಕ್ಕೆ ಆರೋಗ್ಯ ಕೊಡುವುದಷ್ಟೇ ಅಲ್ಲ, ಮನಸ್ಸಿಗೆ ಶಾಂತಿ, ಶಿಸ್ತು ಮತ್ತು ಗುರಿ ಸಾಧನೆಗೆ ಅಗತ್ಯವಾದ ಜಾಗೃತಿ ನೀಡುತ್ತದೆ. ಕೇಳು-ಬರೆ ಎಂಬ ಪುಸ್ತಕ ಜ್ಞಾನಕ್ಕಿಂತಲೂ ಮೈದಾನದ ಪಾಠ ದೊಡ್ಡದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಭವಿಷ್ಯದಲ್ಲಿ. ಶಿಸ್ತಿನಿಂದ ಬದುಕಿ, ಸ್ವಚ್ಛತೆಯನ್ನು ಪಾಲಿಸಿ ಸಮಾಜಕ್ಕೆ ದಾರಿದೀಪವಾಗಿರಿ ಎಂದು ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಗಣೇಶ್ ವಾಗ್ಲೆ ಮಾತನಾಡಿ ಇಂದಿನ ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಜಗತ್ತಿನಲ್ಲಿ ತೊಡಗುವ ಕಾಲ ಇದು. ಇಂತಹ ಸಂದರ್ಭದಲ್ಲಿ ಕ್ರೀಡಾಮೈದಾನವು ಮಕ್ಕಳನ್ನು ನಿಜವಾದ ಜೀವನಕ್ಕೆ ಸಂಪರ್ಕಿಸುವ ದೊಡ್ಡ ವೇದಿಕೆ. ಗುರಿ ನಿಗದಿ ಮಾಡಿಕೊಂಡು, ಅದನ್ನು ಸಾಧಿಸಲು ಪರಿಶ್ರಮ ಮಾಡಿದರೆ ಯಾವುದೂ ಅಸಾಧ್ಯವಲ್ಲ. ಗೆಲುವು-ಸೋಲು ಇವು ಕ್ರೀಡೆಯ ಭಾಗ, ಆದರೆ ಭಾಗವಹಿಸುವ ಧೈರ್ಯವೇ ದೊಡ್ಡ ಗೆಲುವು. ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ತೋರಲಿ ಎಂದು ಪ್ರೋತ್ಸಾಹಿಸಿದರು. ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕಿ ಕಾವ್ಯ ಮಾತಾಜಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಿ ಹೆಚ್ಚಿನ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಆಡಳಿತ ಸಮಿತಿಯ ಸದಸ್ಯರು ಮತ್ತು ಕ್ರೀಡಾ ತರಬೇತಿದಾರ ಸಂತೋಷ್ ಉಪಸ್ಥಿತರಿದ್ದರು. ಯೋಗೀಶ್ವರಿ ಮಾತಾಜಿ ಸ್ವಾಗತಿಸಿದರು, ಪ್ರಮೀಳಾ ಮಾತಾಜಿ ವಂದಿಸಿದರು ಹಾಗೂ ನವ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.






