

ಕೊಕ್ಕಡ: ಭಕ್ತರ ಆರೋಗ್ಯ ಸಿದ್ಧಿ, ಇಷ್ಟಾರ್ಥ ಸಿದ್ಧಿ ಹಾಗೂ ಜಾನುವಾರುಗಳಿಗೆ ಎದುರಾಗುವ ತೊಂದರೆ ನಿವಾರಣೆಯ ಸಂಕಲ್ಪದೊಂದಿಗೆ ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲೊಂದಾದ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಕೋರಿ ಜಾತ್ರೆ ಮಂಗಳವಾರ ಭಕ್ತಿ–ಶ್ರದ್ಧೆ–ಸಂಭ್ರಮದ ನಡುವೆ ಯಶಸ್ವಿಯಾಗಿ ಸಮಾಪನಗೊಂಡಿತು. ಊರೂರುಗಳಿಂದ ಹರಿದುಬಂದ ಭಕ್ತರು ಹರಕೆ ತೀರಿಸಿಕೊಂಡು ದೇವರ ಕೃಪೆಗೆ ಪಾತ್ರರಾದರು.

ತುಳುನಾಡಿನ ಕೆಲವೆಡೆ ಕೋರಿ ಜಾತ್ರೆ ಸ್ಥಳೀಯ ದೈವಗಳ ಚಾವಡಿಯಲ್ಲಿ ನಿರ್ದಿಷ್ಟ ಮನೆತನಗಳ ಪಾಲ್ಗೊಳ್ಳುವಿಕೆಯಿಂದ ನಡೆಯುವುದಾದರೂ, ಕೊಕ್ಕಡದ ಕೋರಿ ಜಾತ್ರೆಯ ಸ್ವರೂಪವೇ ವಿಭಿನ್ನ. ಇಲ್ಲಿನ ಅಧಿದೇವತೆಗಳಾದ ಶ್ರೀ ವೈದ್ಯನಾಥೇಶ್ವರ ಮತ್ತು ವಿಷ್ಣುಮೂರ್ತಿ ದೇವರ ಸಾನ್ನಿಧ್ಯದಲ್ಲಿ, ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯಬದ್ಧ ವಿಧಿವಿಧಾನಗಳು ಈ ಜಾತ್ರೆಗೆ ವಿಶೇಷ ವೈಭವವನ್ನು ನೀಡಿದವು.
ಸಂಪ್ರದಾಯದಂತೆ ನೀಲೇಶ್ವರ ಎಡಮನೆ ಬ್ರಹ್ಮಶ್ರೀ ಕೆ.ಯು. ಪದ್ಮನಾಭ ತಂತ್ರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ರಮಾನಂದ ಭಟ್ ಅವರ ನೇತೃತ್ವದಲ್ಲಿ ಗಣಹೋಮ, ಏಕಾದಶ ರುದ್ರಾಭಿಷೇಕ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು.
ಜಾತ್ರೆಯ ಹಿಂದಿನ ದಿನವಾದ ಸೋಮವಾರ ಸಂಜೆ ಕಂಬಳದ ಗದ್ದೆಗೆ ಹಾಲು ಹಾಕಿ, ಗದ್ದೆಯ ಸುತ್ತ ಕೋಲ್ತಿರಿ ಹಚ್ಚಿ ಅಲಂಕರಣ ನಡೆಸಲಾಯಿತು. ಮರುದಿನ ಬೆಳಗ್ಗೆ ಗುತ್ತಿನ ಮನೆಯಿಂದ ಅಲಂಕರಿಸಲಾದ ಹೋರಿ–ಕೋಣಗಳೊಂದಿಗೆ, ಊರೂರುಗಳಿಂದ ಹರಕೆ ಹೇಳಿಕೊಂಡು ಬಂದ ಜಾನುವಾರುಗಳನ್ನು ಕೊಕ್ಕಡ-ಜೋಡುಮಾರ್ಗದ ಬಳಿಯಿಂದ ಚಂಡೆ ವಾದನಗಳೊಂದಿಗೆ ಸುಮಾರು 22ಜೊತೆ ಕೋಣಗಳು ಹಾಗೂ ಅವುಗಳ ಜೊತೆ ಹೋರಿಗಳನ್ನು ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಯಿತು, ದೇವರ ಒಪ್ಪಿಗೆ ಪಡೆದ ಬಳಿಕ ವಾದ್ಯಘೋಷ, ಕೊರಗ ಭೂತಗಳ ಮೆರವಣಿಗೆಯೊಂದಿಗೆ ದೇವರ ಗದ್ದೆಗೆ ಕರೆತರಲಾಯಿತು. ಸಂಪ್ರದಾಯದಂತೆ ಮೊದಲು ಗುತ್ತಿನ ಹೋರಿಗಳನ್ನು ಗದ್ದೆಗೆ ಇಳಿಸಿ, ನಂತರ ಇತರ ಜಾನುವಾರುಗಳನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಓಡಿಸುವ ವಿಧಿ ನೆರವೇರಿತು.
ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಹರಕೆ ಹೇಳಿಕೊಂಡಿದ್ದ ಊರ ಹಾಗೂ ಪರವೂರ ಭಕ್ತರು, ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಬೆಳಗ್ಗಿನಿಂದಲೇ ತಲೆಯಲ್ಲಿ ಸೊಪ್ಪಿನ ಕಟ್ಟು ಹೊತ್ತು ಗದ್ದೆಗೆ ಸುತ್ತು ಬಂದು ಸೊಪ್ಪನ್ನು ಗದ್ದೆಗೆ ಅರ್ಪಿಸಿ, ಗದ್ದೆಯ ನೀರನ್ನು ತೀರ್ಥವಾಗಿ ಸೇವಿಸಿ ಪ್ರೋಕ್ಷಣೆ ಮಾಡಿಕೊಂಡರು.
ಸಂಜೆ ದೇಗುಲದಲ್ಲಿ ಶ್ರೀ ವೈದ್ಯನಾಥೇಶ್ವರ ಹಾಗೂ ವಿಷ್ಣುಮೂರ್ತಿ ದೇವರ ಬಲಿ ಸೇವೆ ನಡೆಯಿತು. ನಾಗಬ್ರಹ್ಮ ದೈವಗಳ ಮುಡಿಯೊಂದಿಗೆ ಗದ್ದೆಗೆ ಸುತ್ತು ಹಾಕಿ ಎಲ್ಲ ವ್ಯವಸ್ಥೆಗಳು ಸರಿಯಾಗಿವೆ ಎಂಬ ಖಾತರಿ ಪಡೆದ ಬಳಿಕ, ದೈವಗಳು ದೇವಳದಿಂದ ಎರಡು ದೇವರನ್ನು ಮೆರವಣಿಗೆಯಲ್ಲಿ ಎದುರು ನಿಂತು ಕರೆದುಕೊಂಡು ಬಂದ ಸಂದರ್ಭ ದಾರಿಯುದ್ದಕ್ಕೂ ಜನಸ್ತೋಮ ನೆರೆದಿತ್ತು. ಗದ್ದೆಯ ಎದುರಿನ ಭಂಡಾರಿ ಮಜಲೆ ಎಂಬ ಪ್ರಸಿದ್ಧ ಸ್ಥಳದ ಕಟ್ಟೆಯಲ್ಲಿ ದೇವರು ಕೂತ ತಕ್ಷಣ, ಗದ್ದೆಯ ಮಧ್ಯಭಾಗದಲ್ಲಿ ನಾಗಬ್ರಹ್ಮನ ಸಂಕೇತವಾಗಿ ಎತ್ತರದ ಹೂವಿನಿಂದ ಅಲಂಕರಿಸಲಾದ ತೇರನ್ನು (ಪೂಕರೆ) ನಿಲ್ಲಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಜಾತ್ರೆಯ ಅಂಗವಾಗಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ಸೇವೆ ನಡೆಯಿತು. ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.
ಕಾರ್ಯಕ್ರಮದಲ್ಲಿ ಪವಿತ್ರಪಾಣಿ ಎ. ರಾಧಕೃಷ್ಣ ಎಡಪಡಿತ್ತಾಯ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೆದಿಲಾಯ, ಉದ್ಯಮಿ ಸಮಾಜದ ಕಿರಣ್ ಚಂದ್ರ ಪುಷ್ಪಗಿರಿ, ಶಾಂತಪ್ಪ ಮಡಿವಾಳ, ಕುಶಾಲಪ್ಪ ಗೌಡ ಪುಡಿಕ್ಕೆತ್ತೂರು, ಗಣೇಶ್ ಕಾಶಿ, ದಯಾನೀಶ, ಜಗದೀಶ, ಉದ್ಯಮಿ ನಾಗೇಶ್ ಕುಮಾರ್, ನಾರಾಯಣ ಗೌಡ, ಜಯಪ್ರಕಾಶ್, ಸುರೇಶ್, ದೇಜಪ್ಪ, ರೂಪೇಶ್ ಸೇರಿದಂತೆ ನೌಕರ ವೃಂದ ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದು ಜಾತ್ರೆಯ ಯಶಸ್ಸಿಗೆ ಕೈಜೋಡಿಸಿದರು.






