ನೆಲ್ಯಾಡಿ ಆಲ್ ಬದ್ರಿಯಾ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟ

ಶೇರ್ ಮಾಡಿ

ಗ್ರಾಮೀಣ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಅವಿಭಾಜ್ಯ: ಅಬ್ರಹಾಂ ವರ್ಗೀಸ್

ನೆಲ್ಯಾಡಿ: ನೆಲ್ಯಾಡಿ ಆಲ್ ಬದ್ರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಇದರ ವಾರ್ಷಿಕ ಕ್ರೀಡಾಕೂಟವು ಬುಧವಾರ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು, ಮೆರವಣಿಗೆ ಹಾಗೂ ಶಿಸ್ತು ಪ್ರದರ್ಶನಗಳು ಗಮನ ಸೆಳೆದವು.

ವಿದ್ಯಾಸಂಸ್ಥೆಯ ಅಧ್ಯಕ್ಷ ನಾಝಿಮ್ ಸಾಹೇಬ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಪಠ್ಯಾಧ್ಯಯನದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಆತ್ಮವಿಶ್ವಾಸ, ನಾಯಕತ್ವ ಮತ್ತು ಶಿಸ್ತು ಬೆಳೆಯುತ್ತದೆ. ಇಂತಹ ಕ್ರೀಡಾಕೂಟಗಳು ಮಕ್ಕಳ ಭವಿಷ್ಯ ರೂಪಿಸುವ ಶಕ್ತಿಶಾಲಿ ವೇದಿಕೆಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎನ್.ಎಸ್. ಸುಲೈಮಾನ್ ವಹಿಸಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ. ಕಲಿಕೆ ಮತ್ತು ಕ್ರೀಡೆ ಎರಡನ್ನೂ ಸಮಾನವಾಗಿ ಬೆಳೆಸುವ ಶಿಕ್ಷಣವೇ ಸಂಪೂರ್ಣ ಶಿಕ್ಷಣ. ಈ ನಿಟ್ಟಿನಲ್ಲಿ ಶಾಲೆ ಕೈಗೊಂಡಿರುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ವೇದಿಕೆಯಲ್ಲಿ ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾನ್, ಸದಸ್ಯರಾದ ಮಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಜಯಾನಂದ ಬಂಟ್ರಿಯಾಲ್, ಕೌಕ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಕರಾವಳಿ, ನೆಲ್ಯಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ, ನೆಲ್ಯಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರವೀಣ್, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸೀದಿ ಕಾರ್ಯದರ್ಶಿ ಇಲ್ಯಾಸ್ ಶಾಂತಿಬೆಟ್ಟು, ಕೋಲ್ಪೆ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಶುಕೂರ್, ನೆಲ್ಯಾಡಿ ಎಸ್‌ಡಿಪಿಐ ಅಧ್ಯಕ್ಷ ಸಿದ್ದಿಕ್ ಎನ್. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಫೀಕ್ ಪ್ರಿಯದರ್ಶಿನಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮುಖ್ಯಶಿಕ್ಷಕಿ ಸೀಮಾ ಸ್ವಾಗತಿಸಿದರು. ನೆಲ್ಯಾಡಿ ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಇಬ್ರಾಹಿಂ ಸಾಖಫಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕಿ ಸಾನಿಯಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪಾಯಿಸಾ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ವಾರ್ಷಿಕ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

  •  

Leave a Reply

error: Content is protected !!