


ನೆಲ್ಯಾಡಿ:ನೆಲ್ಯಾಡಿಯ ಎಲೈಟ್ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಬುಧವಾರ ಬ್ಯಾಡ್ಮಿಂಟನ್ ಕೋಚಿಂಗ್ ತರಬೇತಿ ಶಿಬಿರವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಅನ್ನಮ್ಮ ವರ್ಗೀಸ್ ಅವರು ದೀಪ ಬೆಳಗಿಸುವ ಮೂಲಕ ತರಬೇತಿಗೆ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೌಕ್ರಾಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಕೆ ಇಬ್ರಾಹಿಂ ಮಾತನಾಡಿ, ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್ ಸ್ಥಾಪಿಸುವ ಮೂಲಕ ಕ್ರೀಡಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ದಿವಂಗತ ಯು.ಪಿ. ವರ್ಗೀಸ್ ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು. ಸ್ಥಳೀಯ ಗ್ರಾಮೀಣ ಪ್ರತಿಭೆಗಳಿಗೆ ನಗರ ಪ್ರದೇಶಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಕೋರ್ಟ್ ಹಾಗೂ ಕೋಚಿಂಗ್ ಆರಂಭಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದರು. ಈ ತರಬೇತಿ ಶಿಬಿರವು ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಮೆರೆದಾಡಲು ಹಾಗೂ ಮುಂದಿನ ಹಂತಕ್ಕೆ ಸಾಗಲು ಉತ್ತಮ ಅವಕಾಶ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ನೆಲ್ಯಾಡಿ ಗ್ರಾಮ ಪಂಚಾಯತಿ ಸದಸ್ಯ ಮಹಮ್ಮದ್ ಇಕ್ಬಾಲ್ ಮಾತನಾಡಿ ಗ್ರಾಮೀಣ ಪ್ರತಿಭೆಗಳಿಗೆ ಗುಣಮಟ್ಟದ ತರಬೇತಿ ಒದಗಿಸುವ ನಿಟ್ಟಿನಲ್ಲಿ ನುರಿತ ಹಾಗೂ ಅನುಭವಿ ರಾಷ್ಟ್ರಮಟ್ಟದ ನಿವೃತ್ತ ಬ್ಯಾಡ್ಮಿಂಟನ್ ತರಬೇತುದಾರರಿಂದ ಕೋಚಿಂಗ್ ಆರಂಭಿಸಿರುವುದು ಉತ್ತಮ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸೆಲೀನಾ ಯು.ವಿ., ಎಲೈಟ್ ಗ್ರೂಪ್ ನಿರ್ದೇಶಕ ಶಾಜಿ ವರ್ಗೀಸ್, ನೆಲ್ಯಾಡಿ ಗ್ರಾಮ ಪಂಚಾಯತಿ ಸದಸ್ಯ ಮಹಮ್ಮದ್ ಇಕ್ಬಾಲ್, ಏಲಿಯಮ್ಮ ಹಾಗೂ ರಾಷ್ಟ್ರಮಟ್ಟದ ನಿವೃತ್ತ ಬ್ಯಾಡ್ಮಿಂಟನ್ ತರಬೇತುದಾರ ಪಾವನ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಜಿ ವರ್ಗೀಸ್ ಸ್ವಾಗತಿಸಿ ವಂದಿಸಿದರು. ಶಿಬು ವರ್ಗೀಸ್ ಸಹಕಾರ ನೀಡಿದರು.






