


ನೆಲ್ಯಾಡಿ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಗುರಿಯಾಗಿಸಿಕೊಂಡು ಅಲ್ ಬದ್ರಿಯಾ ಇಂಗ್ಲಿಷ್ ಮಾಧ್ಯಮ ಶಾಲೆ, ನೆಲ್ಯಾಡಿ ವತಿಯಿಂದ “ಯಶಸ್ಸಿಗೆ ಮಾರ್ಗದರ್ಶನ ಮತ್ತು ಸಂವಹನ” ಎಂಬ ಶೀರ್ಷಿಕೆಯಡಿಯಲ್ಲಿ ಪೋಷಕರ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ನಸೀಂ ಸಾಹೇಬ್ ಅವರು ವಹಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅಲ್ ಬದ್ರಿಯಾ ಶಾಲೆ ಇಸ್ಮಾಯಿಲ್ ಸಹಾದಿ ಸದರ್ ಉಸ್ತಾದ್ ಅವರು ದುಆ ಆಶೀರ್ವಚನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶಬೀನಾ ರಫೀಖಾ ಹಾಗೂ ಫಾತಿಮಾ ಶಿಫಾನಾ ಅವರು ಮಕ್ಕಳ ಶೈಕ್ಷಣಿಕ, ಭಾವನಾತ್ಮಕ ಮತ್ತು ನೈತಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಿದರು.
ಪೋಷಕರ ನಡವಳಿಕೆ, ಮಾತಿನ ಶೈಲಿ ಹಾಗೂ ಮನೆಯ ವಾತಾವರಣ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಮೇಲೆ ಬೀರುವ ಪರಿಣಾಮವನ್ನು ಸ್ಪಷ್ಟ ಉದಾಹರಣೆಗಳ ಮೂಲಕ ವಿವರಿಸಿದರು. ತಂತ್ರಜ್ಞಾನ ಬಳಕೆಯಲ್ಲಿ ಜಾಗರೂಕತೆ, ಸಮಯ ನಿರ್ವಹಣೆ, ಮಕ್ಕಳ ಆತ್ಮವಿಶ್ವಾಸ ವೃದ್ಧಿ, ಶಿಸ್ತು ಪಾಲನೆ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು. ಪೋಷಕರು ಮಕ್ಕಳನ್ನು ಕೇವಲ ಅಂಕಗಳ ಆಧಾರದ ಮೇಲೆ ಅಳೆಯದೇ, ಅವರ ಅಂತರಂಗ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂಬ ಸಂದೇಶವನ್ನು ನೀಡಿದರು. ಸಂವಾದಾತ್ಮಕವಾಗಿ ನಡೆದ ಈ ಅಧಿವೇಶನ ಪೋಷಕರಲ್ಲಿ ಹೊಸ ಅರಿವು ಹಾಗೂ ಜಾಗೃತಿ ಮೂಡಿಸಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದೀಕ್ ಮಣ್ಣಗುಂಡಿ, ರಫೀಕ್ ಅಲಂಪಾಡಿ, ಮುಖ್ಯಶಿಕ್ಷಕಿ ಸೀಮಾ ಡೆನಿಸ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಲೀಲಾ ಥಾಮಸ್ ಸ್ವಾಗತಿಸಿದರು, ಆಸಿಯಾ ವಂದಿಸಿದರು.






