

ನೆಲ್ಯಾಡಿ: ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯನಗರ – ನೆಲ್ಯಾಡಿ ಇದರ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ – ಕೌಕ್ರಾಡಿ ಇದರ ಸಹಕಾರದೊಂದಿಗೆ ಕುಣಿತ ಭಜನಾ ವಾರ್ಷಿಕೋತ್ಸವ ಶುಕ್ರವಾರದಂದು ಸಂಜೆ ಸಂಜೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಇಲ್ಲಿ ನೆರವೇರಿತು.
ಕುಣಿತ ಭಜನಾ ವಾರ್ಷಿಕೋತ್ಸವವನ್ನು ನೆಲ್ಯಾಡಿ ದತ್ತಕೃಪಾ ಸ್ಟೋರ್ ನ ಮಾಲಕ ಪದ್ಮನಾಭ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. 11ಕುಣಿತ ಭಜನಾ ತಂಡಗಳು ಸುಮಾರು ಎರಡು ಗಂಟೆಗಳ ಕಾಲ ಕುಣಿತ ಭಜನೆಯನ್ನು ನಡೆಸಿಕೊಟ್ಟರು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಗೌರವಾಧ್ಯಕ್ಷ, ಪ್ರಸಿದ್ಧ ಜ್ಯೋತಿಷಿ ಶ್ರೀಧರ್ ಗೋರೆ ಅವರು ಮಾತನಾಡಿ ಒಂದು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ನಡೆಯುತ್ತಿದೆ ಅಂದರೆ ಅಲ್ಲಿ ಎಷ್ಟು ಪಾವಿತ್ರತೆ ಇದೆ, ಅಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತಿದೆ ಎಂದು ತಿಳಿಯುತ್ತದೆ. ಭಜನೆ ಮಾಡಿ ದೇಹಕ್ಕೆ ಆಯಾಸವಾಗಿರಬಹುದು ಆದರೆ ಮನಸ್ಸಿಗೆ ಆಯಾಸವಾಗಿರುವುದಿಲ್ಲ. ಭಕ್ತಿ ಪ್ರಜ್ಞೆ ಇಲ್ಲದವರಿಗೆ ಭಜನಾ ಕಾರ್ಯಕ್ರಮಗಳು ಪ್ರೇರಣೆಯಾಗುತ್ತದೆ. ಭಜನೆಯನ್ನು ಕನಕದಾಸರು, ಪುರಂದರದಾಸರಂಥವರು ಭಜನೆಯನ್ನು ಆರಂಭಿಸಿದವರು. ಭಜನೆ ಮಾಡುವುದಕ್ಕೆ ಜಾತಿ ಧರ್ಮಗಳಿಲ್ಲ. ಭಜನೆ ಮಾಡಿದವರಿಗೆ, ನೋಡಿದವರಿಗೂ, ಮಾಡಿಸಿದವರಿಗೂ, ಅನುಮೋದನೆ ಕೊಟ್ಟವರಿಗೂ ಪುಣ್ಯ ದೊರೆಯುತ್ತದೆ. ಹಿಂದೂ ಧರ್ಮದಲ್ಲಿ ಸಂಘಟನೆ ಇರಬೇಕು ಇದರಿಂದ ಧರ್ಮ ಉಳಿಯುತ್ತದೆ. ಭಕ್ತರಲ್ಲಿ ಬೇಧ, ಭಾವ ಇರಬಾರದು ದೇವರಿಗೆ ಎಲ್ಲರೂ ಸಮಾನ. ದೇವರಿಗೆ ಜಾತಿಭೇದವಿಲ್ಲ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್ ನೆಕ್ರಾಜೆ ಮಾತನಾಡಿ ನೆಲ್ಯಾಡಿ ಭಾಗದಲ್ಲಿ ಭಜನೆಯನ್ನು ಪ್ರಾರಂಭ ಮಾಡಿದವರು ಸುಬ್ರಹ್ಮಣ್ಯ ವಿಲಾಸ ಹೋಟೆಲ್ ನ ಮಾಲಕ ಸುಬ್ರಮಣ್ಯ ಆಚಾರ್ ಅವರು. ನೆಲ್ಯಾಡಿ ಭಾಗದಲ್ಲಿ ಹಿಂದೂ ಸಂಘಟನೆಯ ಬೀಜವನ್ನು ಬಿತ್ತಿ ಬೆಳೆಸಿದವರು ಎನ್.ವಿ.ವ್ಯಾಸರವರು. ಈ ಭಾಗದ ಸಂಘದ ಶಾಖೆಯನ್ನು ಬೆಳಸಿದವರು ಸಣ್ಣಂಪಾಡಿಯ ಜಯರಾಮ್ ಅವರು. ಸಂಘ ಹಿಂದುತ್ವ, ಹಿಂದೂ ಸಮಾಜ, ಹಿಂದೂ ರಾಷ್ಟ್ರ ಈ ಕಲ್ಪನೆ ನಿಟ್ಟುಕೊಂಡು ಕಳೆದ ನೂರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದೆ. ಹಿಂದೂ ಸಮಾಜ ಉಳಿಯದಿದ್ದರೆ ದೇಶ ಉಳಿಯಲು ಸಾಧ್ಯವಿಲ್ಲ. ದೇಶದಲ್ಲಿ ಹಿಂದುಗಳ ಜನಸಂಖ್ಯೆ ಕುಸಿಯುತಿದೆ. ಹಿಂದುಗಳಿಗೆ ಇರುವ ಏಕೈಕ ದೇಶ ಭಾರತವಾಗಿದೆ. ಹಿಂದೂ ಸಮಾಜದ ಸಂಘಟನೆಗೆ ಒಂದು ಕೇಂದ್ರ ಬಿಂದು ಬೇಕು ಎಂಬ ಉದ್ದೇಶದಿಂದ ನೆಲ್ಯಾಡಿಯಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆ. ಸಂಘವು ಸಮಾಜದ ಮುಂದೆ ಪಂಚ ಪರಿವರ್ತನೆಯ ಐದು ಅಂಶಗಳನ್ನು ಮುಂದಿಟ್ಟಿವೆ ಇವುಗಳನ್ನು ಮುಂದಿನ ದಿನಗಳಲ್ಲಿ ನಾವು ಪಾಲಿಸುವ ಮಹತ್ವವಾದ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯನಗರ-ನೆಲ್ಯಾಡಿ ಇದರ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು ವಹಿಸಿ ಸ್ವಾಗತಿಸಿದರು.
ವೇದಿಕೆಯಲ್ಲಿ ನೆಲ್ಯಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಕಡಬ ತಾಲೂಕು ಬಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಶ್ರೀ ವರಮಹಾಲಕ್ಷ್ಮಿ ಮಾತೃ ಭಜನಾ ಮಂಡಳಿ ಸೂರ್ಯನಗರ – ನೆಲ್ಯಾಡಿ ಇದರ ಕಾರ್ಯದರ್ಶಿ ಸುಮಾ ಸುಂದರ ದೋಂತಿಲ್ಲ ಉಪಸ್ಥಿತರಿದ್ದರು.
ನಿತಿನ್ ಕೊಣಾಲು ಇವರನ್ನು ಸನ್ಮಾನಿಸಲಾಯಿತು. ಸುಮಾ ಸುಂದರ ದೋಂತಿಲ್ಲ ವರದಿ ವಾಚಿಸಿದರು.ರವಿಚಂದ್ರ ಹೊಸವಕ್ಲು ಪ್ರಸ್ತಾವಿಕವಾಗಿ ಮಾತನಾಡಿದರು. ಸೌಮ್ಯ ಸತೀಶ್ಚಂದ್ರ ಗೌಡ ವಂದಿಸಿದರು.






