ಅರಸಿನಮಕ್ಕಿಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ

ಶೇರ್ ಮಾಡಿ

ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಔಷಧಿ ಜನರಿಗೆ ತಲುಪಬೇಕು – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕೊಕ್ಕಡ: ಅರಸಿನಮಕ್ಕಿ-ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಆರಂಭಗೊಂಡಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಸೋಮವಾರ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಶೋಭಾ ಕರಂದ್ಲಾಜೆ, ಅರಸಿನಮಕ್ಕಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜನೌಷಧಿ ಕೇಂದ್ರ ಆರಂಭಗೊಂಡಿರುವುದು ಅತ್ಯಂತ ಸಂತಸದ ವಿಷಯ. ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಔಷಧಿ ಲಭ್ಯವಾಗಬೇಕು ಎನ್ನುವುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೃದಯಪೂರ್ವಕ ಆಶಯವಾಗಿದೆ. ಇದೇ ಉದ್ದೇಶದಿಂದ ದೇಶಾದ್ಯಂತ ಜನೌಷಧಿ ಕೇಂದ್ರಗಳನ್ನು ವಿಸ್ತರಿಸಲಾಗುತ್ತಿದೆ. ಮುಂದಿನ ಒಂದು ವರ್ಷದೊಳಗೆ ದೇಶದಲ್ಲಿ 25 ಸಾವಿರ ಜನೌಷಧಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆಗೆ ಸ್ಪಷ್ಟ ಟಾರ್ಗೆಟ್ ನೀಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಕೇಂದ್ರ ಕಾರ್ಮಿಕ ಇಲಾಖೆ ಮೂಲಕ ಜಾರಿಗೊಳಿಸಿರುವ ಹೊಸ ಕಾರ್ಮಿಕ ಸಂಹಿತೆಗಳ ಬಗ್ಗೆ ಕಾರ್ಮಿಕರು, ಉದ್ಯೋಗದಾತರು ಹಾಗೂ ಸಾರ್ವಜನಿಕರು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು. ಈ ಕಾನೂನುಗಳು ಕಾರ್ಮಿಕರ ಹಿತವನ್ನು ಕಾಪಾಡುವ ಉದ್ದೇಶ ಹೊಂದಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಅರಸಿನಮಕ್ಕಿ-ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಉಪಾಧ್ಯಕ್ಷ ರಾಜು ಸಾಲ್ಯಾನ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿಚಂದ್ರ ರಾವ್, ಅಗ್ರಿಲೀಫ್ ಸಂಸ್ಥೆಯ ಅವಿನಾಶ್ ರಾವ್, ಜನೌಷಧಿ ಕೇಂದ್ರದ ಮಾಲಕ ಶಿವರಂಜನ್, ಅರಸಿನಮಕ್ಕಿ-ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಅಧ್ಯಕ್ಷ ರಾಘವೇಂದ್ರ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೃಶಾಂಕ್ ಖಾಡಿಲ್ಕರ್ ಕಾರ್ಯಕ್ರಮ ನಿರೂಪಿಸಿದರು.

  •  

Leave a Reply

error: Content is protected !!