ಸರಕಾರಿ ಶಾಲೆ ಮಕ್ಕಳಲ್ಲಿ ಬದುಕಿನ ಹೋರಾಟದ ಶಕ್ತಿ ಬೆಳೆಸುತ್ತವೆ – ಸಚಿವೆ ಶೋಭಾ ಕರಂದ್ಲಾಜೆ


ಕೊಕ್ಕಡ: ಸರಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಮನೋಶ್ಚರ್ಯ ಬಲಿಷ್ಠವಾಗಿರುತ್ತದೆ. ಮುಂದೆ ಜೀವನದಲ್ಲಿ ಎದುರಾಗುವ ಎಲ್ಲ ರೀತಿಯ ಕಷ್ಟ, ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಅವರಿಗೆ ಬಾಲ್ಯದಲ್ಲೇ ಬೆಳೆದುಬರುತ್ತದೆ. ಈ ಕಾರಣಕ್ಕಾಗಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜತೆಗೆ ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ ನೀಡುವ ಕೆಲಸ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಕೇಂದ್ರ ಅತಿಸಣ್ಣ, ಮಧ್ಯಮ ಕೈಗಾರಿಕೆ ಹಾಗೂ ಉದ್ಯೋಗ ಖಾತೆಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಶಿಶಿಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ನಿರ್ಮಾಣಗೊಂಡ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. “ಸರಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಬಲಪಡಿಸುವುದು ಕೇವಲ ಸರ್ಕಾರದ ಹೊಣೆಗಾರಿಕೆಯಷ್ಟೇ ಅಲ್ಲ, ಸಮಾಜದ ಸಹಭಾಗಿತ್ವವೂ ಅಗತ್ಯ. ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಮುಂದೆ ಬಂದು ನೆರವು ನೀಡಿರುವುದು ಶ್ಲಾಘನೀಯ. ಇಂತಹ ಕಾರ್ಯಗಳು ಮುಂದಿನ ಪೀಳಿಗೆಗೆ ದಿಕ್ಕು ತೋರಿಸುವುದರೊಂದಿಗೆ ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ” ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು “ಮಕ್ಕಳು ತಮ್ಮ ತಾಯಿ ಭಾಷೆಯಲ್ಲಿ ಕಲಿಯುವಾಗ ಆಲೋಚನಾ ಶಕ್ತಿ, ಸಂಸ್ಕೃತಿ ಹಾಗೂ ಮೌಲ್ಯಗಳು ಗಟ್ಟಿಯಾಗಿ ಬೆಳೆದುಕೊಳ್ಳುತ್ತವೆ. ಸರಕಾರಿ ಶಾಲೆಗಳು ಶಿಸ್ತು, ಸಹಬಾಳ್ವೆ ಮತ್ತು ಶ್ರಮದ ಮೌಲ್ಯಗಳನ್ನು ಮಕ್ಕಳಲ್ಲಿ ರೂಪಿಸುತ್ತವೆ. ಈ ಶಕ್ತಿಯೇ ಅವರನ್ನು ಬದುಕಿನಲ್ಲಿ ಯಶಸ್ವಿಗಳಾಗಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಂಸದ ಕ್ಯಾ। ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಬೆಂಗಳೂರಿನ ಕೆಮ್ ಟ್ರೆಂಡ್ ಇಂಡಿಯಾದ ಉಪಾಧ್ಯಕ್ಷ ರಾಜೇಶ್ ಫಡ್ಕೆ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ರೋಟರಿ ಕ್ಲಬ್ ಮಾಜಿ ಕಾರ್ಯದರ್ಶಿ ಸಂದೇಶ್ ರಾವ್, ನಿವೃತ್ತ ಸೈನಿಕ ಪ್ರಸನ್ನ ಮನೋಹರ್ ಎಂ. ಗೋಖಲೆ, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಗೌಡ, ವಾಸ್ತುಶಿಲ್ಪಿ ಕರುಣಾಕರ, ಮುಖ್ಯಶಿಕ್ಷಕಿ ಸರಸ್ವತಿ, ಗ್ರಾಮ ಪಂಚಾಯತ್ ಸದಸ್ಯೆಯರಾದ ಕಮಲಾಕ್ಷಿ, ಲಲಿತ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳ್ತಂಗಡಿ ರೋಟರಿ ಕ್ಲಬ್ ಸಹಕಾರದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಶೌಚಾಲಯವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಎಂ. ಗೋಖಲೆ ಮನೋಹರ್ ಸಂಪಾದನೆಯ ನೆನಪಿನ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಶಿಶಿಲ ಗ್ರಾ.ಪಂ. ಅಧ್ಯಕ್ಷ ಸುಧೀನ್ ಡಿ. ಸ್ವಾಗತಿಸಿದರು. ಕರುಣಾಕರ ಅಡ್ಡಹಳ್ಳ ಪ್ರಾಸ್ತಾವಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ ವಂದಿಸಿದರು. ರಮೇಶ್ ಬೈರಕಟ್ಟ ಕಾರ್ಯಕ್ರಮ ನಿರೂಪಿಸಿದರು.
ಸಂಜೆ 6.00 ಗಂಟೆಯಿಂದ ಸಾಂಸ್ಕೃತಿಕ ವೈಭವ ನಡೆಯಿತು. ಇದರ ಸಭಾಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೆಕಳ ಹಾಜಬ್ಬ, ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು ಸೇರಿದಂತೆ ಇತರರು ಭಾಗವಹಿಸಿದ್ದರು. ರಾತ್ರಿ 9.30 ಗಂಟೆಯಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ರಾಘು ಮಾಸ್ಟ್ರು ಹಾಸ್ಯಮಯ ತುಳು ನಾಟಕ ಪ್ರದರ್ಶನ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶಿಶಿಲ ದೇಗುಲಕ್ಕೆ ಸಚಿವೆ ಭೇಟಿ:
ಇದೇ ಸಂದರ್ಭದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರು ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರದ ಪ್ರಸಿದ್ಧ ದೇವರ ಮೀನುಗಳಿಗೆ ಆಹಾರ ನೀಡಿದರು. ಈ ವೇಳೆ ಅರ್ಚಕ ರಾಮ ಕಾರಂತ ಸಚಿವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸದ ಕ್ಯಾ। ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಕರುಣಾಕರ ಶಿಶಿಲ, ಹತ್ಯಡ್ಕ ಸಿಎ ಬ್ಯಾಂಕ್ ಅಧ್ಯಕ್ಷ ರಾಘವೇಂದ್ರ ನಾಯಕ್, ಸೂರಜ್ ನಲ್ಲಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನೀಲ್ ಗೋಖಲೆ, ಸದಸ್ಯ ನಾರಾಯಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.






