

ಕೊಕ್ಕಡ:ನಿಡ್ಲೆ ಗ್ರಾಮದಲ್ಲಿ ಮಂಗಗಳ ಅತಿರೇಕದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರು ಹಾಗೂ ಗ್ರಾಮಸ್ಥರ ಆಕ್ರೋಶ ಮಂಗಳವಾರ ನಡೆದ ನಿಡ್ಲೆ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯಲ್ಲಿ ಭುಗಿಲೆದ್ದಿತು. ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಬರೆಂಗಾಯ ಸರ್ಕಾರಿ ಶಾಲಾ ವಠಾರದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯ ವಿರುದ್ಧ ಗ್ರಾಮಸ್ಥರು ಕಿಡಿಕಾರಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಜನರ ಸಮಸ್ಯೆಗಳಿಗೆ ಕಿವಿಯಾಗಿ ಪ್ರಾಮಾಣಿಕವಾಗಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಮೊಳಂಪ್ಪಾಯ–ಕಾಟ್ಲ ರಸ್ತೆ ದುರಸ್ತಿ ಹಾಗೂ ರಸ್ತೆ ಬದಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಅವಧಿಯಲ್ಲಿ ನಿಡ್ಲೆ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಇತ್ತೀಚೆಗೆ ಸರ್ಕಾರದಿಂದ ಸಮರ್ಪಕ ಅನುದಾನ ಬಿಡುಗಡೆಯಾಗದ ಕಾರಣ ಅಭಿವೃದ್ಧಿಗೆ ಅಡಚಣೆ ಎದುರಾಗಿದೆ. ಅನುದಾನ ಲಭ್ಯವಾದ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಚರಂಡಿ ವ್ಯವಸ್ಥೆಗೆ ಪಂಚಾಯತ್ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದರು.
ಗ್ರಾಮ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಉದ್ಯೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಶಾಸಕರು, ಮೊಳಂಪ್ಪಾಯ ನೆಟ್ವರ್ಕ್ ಸಮಸ್ಯೆ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಗ್ರಾಮ ಪಂಚಾಯತ್ ರಸ್ತೆಗಳ ಮೇಲೆ ನಡೆಯುತ್ತಿರುವ ಒತ್ತುವರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಂಗಗಳ ಹಾವಳಿ ಪ್ರಮುಖ ವಿಷಯವಾಗಿ ಚರ್ಚೆಗೆ ಬಂದಿತು. ಗ್ರಾಮದಲ್ಲಿ ಕೋತಿಗಳ ತಂಡಗಳು ತೆಂಗಿನ ಮರಗಳಲ್ಲಿ ಸೀಯಾಳವನ್ನೇ ಉಳಿಸದೆ ಹಾನಿ ಮಾಡುತ್ತಿವೆ. ಮನೆಗಳ ಹಂಚುಗಳನ್ನು ಒಡೆದು ಮನೆಯೊಳಗೆ ನುಗ್ಗುತ್ತಿವೆ, ಅಡಿಕೆ ತೋಟಗಳಲ್ಲಿ ನಳ್ಳಿಗಳನ್ನು ಹಾಳುಮಾಡುತ್ತಿವೆ. ವ್ಯಾಪಕವಾಗಿ ಮಂಗಗಳ ಹಾವಳಿಯಿಂದ ರೈತರು ಕಂಗೆಟ್ಟಿದ್ದರೂ ಅರಣ್ಯ ಇಲಾಖೆ ಅವುಗಳನ್ನು ಹಿಡಿಯುವ ಯಾವುದೇ ಕಾರ್ಯ ನಡೆಸುತ್ತಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಶಾಸಕ ಹರೀಶ್ ಪೂಂಜ, ನವಿಲು, ಮಂಗ, ಆನೆ, ಕಾಡುಹಂದಿ ಉಪಟಳ ಹೆಚ್ಚಾಗಿರುವ ಬಗ್ಗೆ ಈಗಾಗಲೇ ಸಚಿವರ ಗಮನ ಸೆಳೆದಿದ್ದೇನೆ ಎಂದರು. ಅರಣ್ಯ ಇಲಾಖೆಯ ಜಾಗದಲ್ಲಿ ಭತ್ತ ಹಾಗೂ ಹಣ್ಣು-ಹಂಪಲು ಗಿಡಗಳನ್ನು ನಾಟಿ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಚಾರ್ಮಾಡಿ–ಕಡಿರುದ್ಯಾವರ ವರೆಗೆ ಸೋಲಾರ್ ಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಪಶ್ಚಿಮಘಟ್ಟ ಪ್ರದೇಶದ ಗ್ರಾಮಗಳಲ್ಲೂ ಈ ಬೇಲಿ ಅಳವಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಮ್ಯಾಂಕಿ ಪಾರ್ಕ್ ನಿರ್ಮಾಣ ಕುರಿತು ಕೂಡ ಸಚಿವರಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ಮಳೆಮಾಪನ ಯಂತ್ರ ಕೆಟ್ಟು ಹೋಗಿರುವುದರಿಂದ ಬೆಳೆ ವಿಮೆ ಪಡೆಯುವಲ್ಲಿ ಸಮಸ್ಯೆಯಾಗುತ್ತಿದೆ. ವ್ಯಾಪಕ ಮಳೆಯಿಂದ ಅಡಿಕೆ ಕೊಳೆರೋಗ, ಹಳದಿ ರೋಗ ಹಾಗೂ ನಳ್ಳಿ ಹುದುರುವಿಕೆಯಿಂದ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಮಳೆಮಾಪನ ಕೆಟ್ಟಿರುವುದರಿಂದ ರೈತರ ನೋವು ಯಾರಲ್ಲಿ ಹೇಳಬೇಕು ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ಶಾಸಕರು, ಮುಂದಿನ ಮಳೆಗಾಲದೊಳಗೆ ಮಳೆಮಾಪನ ಯಂತ್ರ ದುರಸ್ತಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದರು. ನಿಡ್ಲೆ ಗ್ರಾಮಕ್ಕೆ ಈಗಾಗಲೇ ಒಂದು ಕೋಟಿ ರೂಪಾಯಿ ಬೆಳೆ ವಿಮೆ ಜಮೆಯಾಗಿದೆ. ತಾಲೂಕು ಮಟ್ಟದಲ್ಲಿ ಸುಮಾರು 70 ಕೋಟಿ ರೂಪಾಯಿ ಬೆಳೆ ವಿಮೆ ಬಂದಿದೆ ಎಂದು ಮಾಹಿತಿ ನೀಡಿದರು.
ನಿಡ್ಲೆ–ಪಟ್ರಮೆ ರಸ್ತೆ ದುರಸ್ತಿ, ಅಕ್ರಮ–ಸಕ್ರಮ ಕಡತಗಳ ವಿಲೇವಾರಿ, ಕೋವಿ ಪರವಾನಿಗೆಯನ್ನು ತಾಲೂಕು ಆಡಳಿತದಲ್ಲೇ ನೀಡುವ ವ್ಯವಸ್ಥೆ, ಬಿಪಿಎಲ್ ಕಾರ್ಡ್ ವಿತರಣೆ, ಕೊರೊದೊಟ್ಟು ರಸ್ತೆ ದುರಸ್ತಿ, ಗುತ್ತಿಮಾರು ಕಾಲುಸಂಕದ ಹದಗೆಟ್ಟ ಸ್ಥಿತಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಗಮನ ಸೆಳೆದರು. ಈ ಎಲ್ಲ ವಿಷಯಗಳನ್ನು ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಉತ್ತಮ ಹಾಗೂ ಗುಣಮಟ್ಟದ ಸೇವೆಗಾಗಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದ ನಿಡ್ಲೆ ಆಯುಷ್ಮಾನ್ ಆರೋಗ್ಯ ಉಪಕೇಂದ್ರಕ್ಕೆ ಶಾಸಕರು ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲ, ಉಪಾಧ್ಯಕ್ಷ ರುಕ್ಮಯ್ಯ ಪೂಜಾರಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಇಒ ಭವಾನಿ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ., ಕಾರ್ಯದರ್ಶಿ ಕೇಶವ ಗೌಡ, ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.






