


ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಡಬ ಘಟಕದ ಸಹಯೋಗದೊಂದಿಗೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ ಕಡಬದ ಅಮೃತ ಸರೋವರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ವಲಯದ ಅಧ್ಯಕ್ಷ ಕರುಣಾಕರ ಗೋಗಟೆ ಅವರು ಉದ್ಘಾಟಿಸಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ವಿಪತ್ತು ಸಂದರ್ಭಗಳಲ್ಲಿ ಜನರಿಗೆ ತ್ವರಿತ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ತಾಲ್ಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕ್ಯಾಪ್ಟನ್ ಭವನಿ ಶಂಕರ್ ಅವರು ವಹಿಸಿದ್ದರು.
ಈ ಸಂದರ್ಭ ಕಡಬ ತಾಲೂಕಿನ ಆರು ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರಿಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು. ಬ್ಯಾಗ್ ವಿತರಣೆಯ ಬಳಿಕ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ್ ಅವರು, ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸಮಾಜಮುಖಿ ಅನೇಕ ಕಾರ್ಯಕ್ರಮಗಳಿಗೆ ರೂಪ ನೀಡಿದ್ದಾರೆ. ಅವರ ಕಲ್ಪನೆಯಂತೆ ಸ್ಥಳೀಯ ಮಟ್ಟದಲ್ಲಿ ಸರಕಾರದ ವ್ಯವಸ್ಥೆಯೊಂದಿಗೆ ಹೊಂದಿಕೊಂಡು ವಿಪತ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವ ಉದ್ದೇಶದಿಂದ ಆರಂಭಿಸಲಾದ ವಿನೂತನ ಯೋಜನೆಯೇ ಶೌರ್ಯ ವಿಪತ್ತು ನಿರ್ವಹಣಾ ಘಟಕವಾಗಿದೆ. ಈ ಘಟಕದ ಸದಸ್ಯರು ಸೇವಾಮನೋಭಾವನೆಯೊಂದಿಗೆ ಹಲವಾರು ಸಾಮಾಜಿಕ ಹಾಗೂ ವಿಪತ್ತು ಸೇವೆಗಳಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾರೆ ಎಂದರು.
ಉಪ ಅರಣ್ಯಾಧಿಕಾರಿ ಚಿದಾನಂದ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ, ತಮ್ಮ ಇಲಾಖೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯದ ಉಪ ಅರಣ್ಯಾಧಿಕಾರಿ ಸುಬ್ರಹ್ಮಣ್ಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಶಿವಪ್ರಸಾದ್ ಮೈಲೇರಿ, ಕುಟ್ರುಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಗೌಡ ಎ, ಕಡಬ ವಲಯ ಒಕ್ಕೂಟದ ಅಧ್ಯಕ್ಷ ರಮೇಶ್ ರೈ ಅರ್ಪಜೆ ಅವರು ಸಾಂದರ್ಭಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಡಬ ಒಕ್ಕೂಟದ ಅಧ್ಯಕ್ಷೆ ನಳಿನಿ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮೀಶ ಬಂಗೇರ, ಮೋಹನ್ ಕೆರೆಕ್ಕೋಡಿ, ಕಡಬ ವಲಯದ ಭಜನಾ ಪರಿಷತ್ ಅಧ್ಯಕ್ಷ ರಮೇಶ್ ಅಡಿಲು, ಜನಜಾಗೃತಿ ವೇದಿಕೆಯ ಸದಸ್ಯರು, ಒಕ್ಕೂಟ ಅಧ್ಯಕ್ಷರು, ಸಂಘದ ಸದಸ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಕಡಬ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಘಟಕಗಳ ಸದಸ್ಯರು, ಸೇವಾಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಡಬ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ವಿಜೇಶ್ ಜೈನ್ ವಂದಿಸಿದರು. ಮೇಲ್ವಿಚಾರಕ ರವಿಪ್ರಸಾದ್ ನಿರೂಪಿಸಿದರು. ಸೇವಾಪ್ರತಿನಿಧಿ ನಳಿನಿ ಕಾರ್ಯಕ್ರಮ ನಿರ್ವಹಿಸಿದರು.





