


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಡಬ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ತಾಲೂಕು ಇವರ ಸಂಯುಕ್ತ ಆಶಯದಲ್ಲಿ ನೆಲ್ಯಾಡಿಯ ಅಯ್ಯಪ್ಪ ಮಂದಿರದ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆಯುತ್ತಿರುವ 2038ನೇ ಮದ್ಯವರ್ಜನ ಶಿಬಿರಕ್ಕೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಹಾಗೂ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಅವರು ಭೇಟಿ ನೀಡಿ ಶಿಬಿರಾರ್ಥಿಗಳಿಗೆ ಪ್ರೇರಣಾತ್ಮಕ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು.
ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಮಾಜಮುಖಿ ಚಿಂತನೆಯೊಂದಿಗೆ ವ್ಯಸನೀಯರ ಬದುಕು ಮಾತ್ರವಲ್ಲದೆ ಅವರ ಕುಟುಂಬಗಳ ಕಣ್ಣೀರು ಒರೆಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಮದ್ಯಪಾನವು ವ್ಯಕ್ತಿಯನ್ನು ಪಾಪಕರ್ಮದ ದಾರಿಗೆ ತಳ್ಳುವುದರ ಜೊತೆಗೆ ಕುಟುಂಬ, ಸಮಾಜ ಹಾಗೂ ಆರೋಗ್ಯವನ್ನು ನಾಶಗೊಳಿಸುತ್ತದೆ. ಇಂತಹ ದುಷ್ಚಟದಿಂದ ದೂರ ಸರಿಯಲು ಧರ್ಮಸ್ಥಳದ ಮದ್ಯವರ್ಜನ ಶಿಬಿರಗಳು ಆಶಾಕಿರಣವಾಗಿವೆ ಎಂದು ಹೇಳಿದರು.
ಮದ್ಯವರ್ಜನ ಶಿಬಿರದ ಮೂಲಕ ಶಿಬಿರಾರ್ಥಿಗಳಿಗೆ ಹೊಸ ಬದುಕಿನ ಆರಂಭ, ಪುನರ್ಜನ್ಮ ದೊರೆತಂತಾಗಿದೆ. ಈ ಶಿಬಿರಕ್ಕೆ ಸೇರ್ಪಡೆಯಾಗಿರುವುದೇ ಪುಣ್ಯದ ಫಲವಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಖಾವಂದರು ಶಿಬಿರಕ್ಕೆ ಆಗಮಿಸಿ ಶಿಬಿರಾರ್ಥಿಗಳಿಗೆ ಆಶೀರ್ವಾದ ನೀಡಲಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ಪಾಯಸ್ ತಿಳಿಸಿದರು.
ಶಿಬಿರಾರ್ಥಿಗಳು ಶಿಬಿರದಲ್ಲಿ ಪಡೆದ ಸಂಕಲ್ಪವನ್ನು ಜೀವನಪೂರ್ತಿ ಪಾಲಿಸಿ ಸಂಪೂರ್ಣವಾಗಿ ಮದ್ಯವರ್ಜನೆ ಮಾಡಿದರೆ, ಅವರ ಜೀವನದಲ್ಲಿ ಆರೋಗ್ಯ, ಶಾಂತಿ, ಗೌರವ ಹಾಗೂ ಸುಖಸಮೃದ್ಧಿಯ ರೂಪದಲ್ಲಿ ‘ರಾಜಯೋಗ’ ಕಟ್ಟಿಟ್ಟ ಬುತ್ತಿಯಾಗುತ್ತದೆ. ವ್ಯಸನಮುಕ್ತ ಬದುಕೇ ನಿಜವಾದ ಸಾಧನೆ ಎಂದು ಅವರು ಶಿಬಿರಾರ್ಥಿಗಳಿಗೆ ಮನದಟ್ಟು ಮಾಡಿದರು.
ಈ ಸಂದರ್ಭದಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ. ಸವಣೂರು, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಜನಜಾಗೃತಿ ಕರಾವಳಿ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಶಿಬಿರಾಧಿಕಾರಿ ವಿದ್ಯಾಧರ್, ರಮೇಶ್, ಆರೋಗ್ಯ ಸಹಾಯಕಿ ಜಯಲಕ್ಷ್ಮಿ, ಯೋಜನೆಯ ಮೇಲ್ವಿಚಾರಕರು, ಶೌರ್ಯ ಸ್ವಯಂಸೇವಕರು, ನವ ಜೀವನ ಸದಸ್ಯರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.





