


ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜುನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2025–26ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಸಮಾರೋಪ ಹಾಗೂ ಹಿರಿಯ ಸ್ವಯಂಸೇವಕರಿಗೆ ಬೀಳ್ಕೊಡುಗೆ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಗ್ರಂಥಪಾಲಕರಾದ ಮನೋಹರ್ ಶೆಟ್ಟಿ ಮಾತನಾಡಿ, “ತರಗತಿಯ ನಾಲ್ಕು ಗೋಡೆಗಳ ಮಧ್ಯೆ ಕಲಿಸಲಾಗದ ಅನೇಕ ಜೀವನ ಪಾಠಗಳನ್ನು ಎನ್‌ಎಸ್‌ಎಸ್ ಕಲಿಸುತ್ತದೆ. ಎನ್‌ಎಸ್‌ಎಸ್ ಸ್ವಯಂಸೇವಕರಾಗಿ ನೀವು ಪಡೆದುಕೊಂಡ ಅನುಭವಗಳು ನಿಮ್ಮ ಮುಂದಿನ ಜೀವನ ಮತ್ತು ವೃತ್ತಿಗೆ ದಾರಿದೀಪವಾಗಲಿ. ಎನ್‌ಎಸ್‌ಎಸ್ ಆಶಯಗಳಿಗೆ ಎಂದೆಂದಿಗೂ ಬದ್ಧರಾಗಿ, ಸ್ವಸ್ಥ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲ ಪ್ರಮೋದ್ ಕುಮಾರ್ ಅವರು, “ಎನ್‌ಎಸ್‌ಎಸ್ ಮೂಲಕ ಮಾಡುವ ಪ್ರತಿಯೊಂದು ಕಾರ್ಯವೂ ಸೇವೆಯ ಮನೋಭಾವದಿಂದ ರೂಪುಗೊಳ್ಳುತ್ತದೆ. ಎನ್‌ಎಸ್‌ಎಸ್ ಮೂಲಕ ಅನೇಕ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸಮಾಜದೊಂದಿಗೆ ಬೆರೆತು ಹೇಗೆ ಬದುಕಬೇಕೆಂಬ ಪಾಠವನ್ನು ಎನ್‌ಎಸ್‌ಎಸ್ ಕಲಿಸುತ್ತದೆ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ರಾಜೇಶ್ ಬಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ, ಎನ್‌ಎಸ್‌ಎಸ್ ಘಟಕದ ನಾಯಕಿ ರಾಶಿಕ ಹಾಗೂ ನಾಯಕ ಸಂಕೇತ್ ಉಪಸ್ಥಿತರಿದ್ದರು.
ನಾಯಕಿ ರಾಶಿಕ ವಾರ್ಷಿಕ ಚಟುವಟಿಕೆಗಳ ವರದಿಯನ್ನು ವಾಚಿಸಿದರು. ಸ್ವಯಂಸೇವಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತಲ್ಲದೆ, ಹಿರಿಯ ಸ್ವಯಂಸೇವಕರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಸ್ವಯಂಸೇವಕಿ ಮಾನ್ವಿತಾ ಕಾರ್ಯಕ್ರಮ ನಿರೂಪಿಸಿದರು. ಅಪೇಕ್ಷಾ ಸ್ವಾಗತಿಸಿ, ನಾಯಕ ಸಂಕೇತ್ ವಂದಿಸಿದರು.





