


ನೆಲ್ಯಾಡಿ: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ದಿ| ಉಮೇಶ್ ಶೆಟ್ಟಿ ಮೂಡಂಬೈಲ್‌ಗುತ್ತು ಅವರಿಗೆ ನುಡಿನಮನ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಜ.24ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು.

ನುಡಿನಮನ ಸಲ್ಲಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು, ಹಲವು ಏಳು–ಬೀಳುಗಳನ್ನು ಎದುರಿಸಿದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇಂದು ಜಿಲ್ಲೆಯಲ್ಲೇ ಉತ್ತಮ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಉಮೇಶ್ ಶೆಟ್ಟಿಯವರ ಕಾರ್ಯದಕ್ಷತೆ ಪ್ರಮುಖ ಕಾರಣ. ಅವರ ಅವಧಿಯಲ್ಲಿ ಎರಡು ಶಾಖೆಗಳು, ಕೇಂದ್ರ ಕಚೇರಿ ಹಾಗೂ ಶಾಖೆಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಸಂಘದಲ್ಲಿ ಸತತ ಶೇ.100 ಸಾಲ ವಸೂಲಾತಿ ಸಾಧನೆಗೂ ಅವರು ಕಾರಣಕರ್ತರು. ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನಿರಂತರವಾಗಿ ಪ್ರಶಸ್ತಿ ಪಡೆದಿರುವುದು ಅವರ ಶ್ರಮದ ಪ್ರತಿಫಲವಾಗಿದೆ. ಶ್ರಮಜೀವಿ, ಸಂಘಜೀವಿಯಾಗಿದ್ದ ಅವರು ಸದಾ ಸಂಸ್ಥೆಯ ಭವಿಷ್ಯವನ್ನೇ ಚಿಂತಿಸುತ್ತಿದ್ದರು. ಅವರ ಅಗಲುವಿಕೆ ಕುಟುಂಬಕ್ಕೂ, ಸಂಘದ ಸದಸ್ಯರಿಗೂ ಅಪಾರ ದುಃಖ ತಂದಿದೆ. ಅವರ ಹೆಸರು ನೆಲ್ಯಾಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಸದಾ ಅಮರವಾಗಿರಲಿ ಎಂದು ಹೇಳಿದರು.
ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಉಮೇಶ್ ಶೆಟ್ಟಿ ಅವರು 30 ವರ್ಷಗಳ ಕಾಲ ಆರು ಅವಧಿಗೆ ಅಧ್ಯಕ್ಷರಾಗಿ ಎಲ್ಲಾ ನಿರ್ದೇಶಕರನ್ನು ಜೊತೆಯಾಗಿ ಸೇರಿಸಿಕೊಂಡು ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅವರ ಅವಧಿಯಲ್ಲಿ ಸಂಘಕ್ಕೆ ಸತತವಾಗಿ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿಗಳು ದೊರೆತಿವೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದಲೂ ವಿಶೇಷ ಸನ್ಮಾನ ಪಡೆದಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯರಾಗಿದ್ದ ಅವರು ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದರು. ಅವರ ಸೇವಾಮನೋಭಾವ ನಮಗೆಲ್ಲರಿಗೂ ಮಾದರಿಯಾಗಿದೆ ಎಂದು ಸ್ಮರಿಸಿದರು.
ಸಂಘದ ಕಾನೂನು ಸಲಹೆಗಾರ ಹಾಗೂ ನೋಟರಿ ನ್ಯಾಯವಾದಿ ಶಿವಪ್ರಸಾದ್ ಇ. ಮಾತನಾಡಿ, 1994–95ರಲ್ಲಿ ಸಂಕಷ್ಟದಲ್ಲಿದ್ದ ಸಂಘವನ್ನು ಉಳಿಸುವ ಹೊಣೆ ಉಮೇಶ್ ಶೆಟ್ಟಿಯವರಿಗೆ ನೀಡಲಾಗಿತ್ತು. ಆಡಳಿತ ಅನುಭವವಿಲ್ಲದಿದ್ದರೂ ಸಂಘವನ್ನು ಮಾದರಿಯಾಗಿ ಮುನ್ನಡೆಸಿದರು. ಅವರು ದುಡ್ಡಿನ ಹಿಂದೆ ಎಂದೂ ಹೋದವರಲ್ಲ. ಸಂಘದ ಉಳಿವಿಗಾಗಿ ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧರಾಗಿದ್ದರು. ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಅವರು ಮಾದರಿ ವ್ಯಕ್ತಿಯಾಗಿದ್ದರು. ಕ್ಯಾಂಪ್ಕೋ ಶಾಖೆ ಸ್ಥಾಪನೆ, ಪಡುಬೆಟ್ಟುವಿನಲ್ಲಿ ಹೈಸ್ಕೂಲ್ ಆರಂಭಕ್ಕೂ ಕಾರಣಕರ್ತರಾಗಿದ್ದರು. ತಮ್ಮ 25ನೇ ವಯಸ್ಸಿನಿಂದಲೇ ಸಮಾಜಕ್ಕಾಗಿ ದುಡಿದವರು ಎಂದರು.
ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಮಾತನಾಡಿ, ಉಮೇಶ್ ಶೆಟ್ಟಿ ಅವರು ಮಾಡಿದ ಸತ್ಕಾರ್ಯಗಳನ್ನು ಸದಾ ನೆನಪಿಟ್ಟುಕೊಳ್ಳಬೇಕು. ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ಮಾಡಿದ ಅವರ ತ್ಯಾಗ ಹಾಗೂ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ,ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ., ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ನಿವೃತ್ತ ಮುಖ್ಯಶಿಕ್ಷಕ ವೆಂಕಟ್ರಮಣ ಆರ್., ಸಂಘದ ನಿರ್ದೇಶಕರೂ ಜಿ.ಪಂ. ಮಾಜಿ ಸದಸ್ಯರೂ ಆದ ಸರ್ವೋತ್ತಮ ಗೌಡ, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಸಲಾಂ ಬಿಲಾಲ್, ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್. ಗೌಡ, ಉದ್ಯಮಿ ನಾಸೀರ್ ಹೊಸಮನೆ, ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ತಾ.ಪಂ. ಮಾಜಿ ಸದಸ್ಯ ವ್ಯಾಸ ಎನ್.ವಿ., ಕಿಶೋರ್ ಶಿರಾಡಿ ಸೇರಿದಂತೆ ಅನೇಕ ಗಣ್ಯರು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ನಿರ್ದೇಶಕರು, ಮಾಜಿ ನಿರ್ದೇಶಕರು, ನಿವೃತ್ತ ಹಾಗೂ ಹಾಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮೇನೇಜರ್‌ಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು.
ಸಂಘದ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ. ಸಹಿತ ಸಿಬ್ಬಂದಿಗಳು ಸಹಕರಿಸಿದರು.





