


ನೆಲ್ಯಾಡಿ: ಮದ್ಯವರ್ಜನ ಶಿಬಿರದ ಮೂಲಕ ಪಾನಮುಕ್ತರಾದವರ ಕುಟುಂಬಗಳಲ್ಲಿ, ವಿಶೇಷವಾಗಿ ಮಹಿಳೆಯರ ಮತ್ತು ಮಕ್ಕಳ ಮುಖದಲ್ಲಿ ಸಂತಸದ ನಗು ಕಾಣಿಸುತ್ತಿದೆ. ಇಂತಹ ಶಿಬಿರಗಳು ಸಮಾಜಕ್ಕೆ ಅಗತ್ಯವಿದ್ದು, ಭಾಗವಹಿಸಿದವರು ಮನಸ್ಸು ಗಟ್ಟಿ ಮಾಡಿಕೊಂಡು ಮತ್ತೆ ಮದ್ಯವ್ಯಸನಿಗಳಾಗಬಾರದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಹೇಳಿದರು.

ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ–ಕೌಕ್ರಾಡಿ ಇದರ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ 2038ನೇ ಮದ್ಯವರ್ಜನ ಶಿಬಿರಕ್ಕೆ ಜ.25ರಂದು ಭೇಟಿ ನೀಡಿ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಶಿಬಿರದಲ್ಲಿ ಭಾಗವಹಿಸುವ ಮದ್ಯವ್ಯಸನಿಗಳು ತಮ್ಮ ನೋವಿನ ಅನುಭವಗಳನ್ನು ಹಂಚಿಕೊಳ್ಳುವಾಗ ಮನಸ್ಸು ವ್ಯಥೆಯಾಗುತ್ತದೆ. ಆದ್ದರಿಂದ ಶಿಬಿರ ಮುಗಿದ ಬಳಿಕವೂ ಎಚ್ಚರಿಕೆಯಿಂದ ಜೀವನ ನಡೆಸಬೇಕು. ಹಳೆಯ ಸ್ನೇಹಿತರ ಒತ್ತಡಕ್ಕೆ ಮಣಿದು ಮತ್ತೆ ತಪ್ಪು ಮಾಡಬಾರದು. ಒಮ್ಮೆ ಅನುಭವಿಸಿದ ನೋವು ಮತ್ತೆ ಮರುಕಳಿಸಬಾರದು ಎಂದು ಅವರು ಎಚ್ಚರಿಸಿದರು.
ಪಾನಮುಕ್ತರಾದವರ ಮಕ್ಕಳು ಇಂದು ಉನ್ನತ ವ್ಯಾಸಂಗ ಪಡೆದು ಉತ್ತಮ ಉದ್ಯೋಗದಲ್ಲಿದ್ದಾರೆ. ಇದು ಮದ್ಯವರ್ಜನ ಶಿಬಿರದ ನಂತರ ಕಂಡುಬರುವ ಸಕಾರಾತ್ಮಕ ಬೆಳವಣಿಗೆ. 50 ಮಂದಿ ಪಾನಮುಕ್ತರಾದರೆ, ಒಂದೇ ವರ್ಷದಲ್ಲಿ ಅವರಿಗೆ ಒಟ್ಟು 1 ಕೋಟಿ ರೂಪಾಯಿಗೂ ಹೆಚ್ಚು ಉಳಿತಾಯವಾಗುತ್ತದೆ. ಇದರಿಂದ ನಷ್ಟವಾಗುವವರು ಮಾತ್ರ ಶಿಬಿರಗಳನ್ನು ದೂಷಿಸುತ್ತಾರೆ. ಯಾರೋ ಬೈಯುತ್ತಾರೆ ಎಂದು ಮದ್ಯವರ್ಜನ ಶಿಬಿರಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಡಾ| ಹೆಗ್ಗಡೆ ಸ್ಪಷ್ಟಪಡಿಸಿದರು. ಮದ್ಯವರ್ಜನ ಶಿಬಿರ ಮುಗಿದ ಬಳಿಕವೂ ಸ್ನೇಹಿತರನ್ನೂ, ಬಂಧುಗಳನ್ನೂ ಇಂತಹ ಶಿಬಿರಗಳಿಗೆ ಸೇರಿಸುವ ಮೂಲಕ ಇನ್ನಷ್ಟು ಮಂದಿಗೆ ಜಾಗೃತಿ ಮೂಡಿಸಬೇಕು. ಈ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ‘ಜಾಗೃತಿ ಮಿತ್ರ’ ಪ್ರಶಸ್ತಿ ದೊರೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರೆ.ಫಾ. ವರ್ಗೀಸ್ ಕೈಪನಡ್ಕ ಮಾತನಾಡಿ, ಒತ್ತಡ, ನಿರಾಸೆ ಸೇರಿದಂತೆ ಹಲವು ಕಾರಣಗಳಿಂದ ಆರಂಭವಾಗುವ ಮದ್ಯಪಾನ ಮುಂದೆ ಗಂಭೀರ ಮದ್ಯವ್ಯಸನಕ್ಕೆ ದಾರಿ ಮಾಡಿಕೊಡುತ್ತದೆ. ಮದ್ಯಪಾನದಿಂದ ಆರೋಗ್ಯ, ಸಂತೋಷ ಮತ್ತು ನೆಮ್ಮದಿ ನಾಶವಾಗುತ್ತದೆ. ಆದ್ದರಿಂದ ಮದ್ಯಪಾನ ತ್ಯಜಿಸಿ ಆರೋಗ್ಯಕರ ಜೀವನ ನಡೆಸುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಪುತ್ತೂರು ಎಸ್ ಆರ್ ಕೆ ಲ್ಯಾಡರ್‍ಸ್ ಮಾಲಕ ಕೇಶವ ಅಮೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ದ.ಕ. ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಗೋರೆ, ಶಿಬಿರದ ವೈದ್ಯಾಧಿಕಾರಿ ಡಾ.ಮೋಹನದಾಸ್ ಗೌಡ, ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ದ.ಕ.–2 ನಿರ್ದೇಶಕ ಬಾಬು ನಾಯ್ಕ, ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು.
ಶಿಬಿರಾರ್ಥಿ ಸುರೇಶ್ ತಮ್ಮ ಅನುಭವ ಹಂಚಿಕೊಂಡರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ. ಸವಣೂರು ವಂದಿಸಿದರು. ಶಿವಪ್ರಸಾದ್ ರೈ ಮೈಲೇರಿ ಹಾಗೂ ರವಿಪ್ರಸಾದ್ ಆಲಾಜೆ ನಿರೂಪಿಸಿದರು. ಅಶೋಕ ಆಚಾರ್ಯ ಬಲ್ಯ ಪ್ರಾರ್ಥಿಸಿದರು. ಡಾ| ಹೆಗ್ಗಡೆಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಗೌರವಿಸಲಾಯಿತು.
ಕೇಶವ ಅಮೈ ಅವರಿಗೆ ಸನ್ಮಾನ:
ಸಮಾರಂಭದಲ್ಲಿ ನೆಲ್ಯಾಡಿ–ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವತಿಯಿಂದ ಉದ್ಯಮಿ ಹಾಗೂ ಎಸ್‌ಆರ್‌ಕೆ ಲ್ಯಾಡರ್‍ಸ್‌ನ ಮಾಲಕ ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಚೇತನ್ ಆನೆಗುಂಡಿ ಅವರು ಕೇಶವ ಅಮೈ ಅವರನ್ನು ಪರಿಚಯಿಸಿದರು.
ಸವಲತ್ತು ವಿತರಣೆ:
ಶೌರ್ಯ ವಿಪತ್ತು ನಿರ್ವಹಣಾ ನೆಲ್ಯಾಡಿ ಘಟಕದ ಸದಸ್ಯರಿಗೆ ಸಾಂಕೇತಿಕವಾಗಿ ಬ್ಯಾಗ್ ವಿತರಣೆ ಮಾಡಲಾಯಿತು. ಜನಮಂಗಳ ಕಾರ್ಯಕ್ರಮದಡಿ ಸುರೇಂದ್ರ ಪಡುಬೆಟ್ಟು ಅವರಿಗೆ ವಾಕರ್, ತಿಮ್ಮಪ್ಪ ರೈ ಪಿಜಕ್ಕಳರಿಗೆ ವಾಟರ್ ಬೆಡ್ ಹಾಗೂ ಅಕ್ಕಮ್ಮ ಅಬ್ರಹಾಂ ಅವರಿಗೆ ವೀಲ್‌ಚೇರ್ ವಿತರಿಸಲಾಯಿತು.





