ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕುಣಿತ ಭಜನಾ ವೈಭವ; ಭಜನೆಯೇ ಸಮಾಜದ ಏಕತೆಗೂ ಸಂಸ್ಕಾರದ ಮೂಲ: ಸತ್ಯನಾರಾಯಣ ಹೆಗ್ಡೆ

ಶೇರ್ ಮಾಡಿ

ನೆಲ್ಯಾಡಿ: ಶ್ರೀ ಮಹಾವಿಷ್ಣು ಗೆಳೆಯರ ಬಳಗ ಪಡುಬೆಟ್ಟು ಇದರ 12ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಡಬ ತಾಲೂಕು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಸಹಕಾರದೊಂದಿಗೆ ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನಾ ಕಾರ್ಯಕ್ರಮ ಶನಿವಾರದಂದು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಭಕ್ತಿಭಾವದಿಂದ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೇವರಿಗೆ ನಿತ್ಯಪೂಜೆ ನೆರವೇರಿಸಲಾಯಿತು. ಸಂಜೆ 6 ಗಂಟೆಗೆ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ ಸಲ್ಲಿಸಿದ ಬಳಿಕ, 20ಕ್ಕೂ ಹೆಚ್ಚು ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ಆರಂಭಗೊಂಡಿತು. ಮಂಗಳೂರು ಸೇವಾಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೃಥ್ವಿಪಾಲ ಕೆ. ಅವರು ದೀಪ ಬೆಳಗಿಸುವ ಮೂಲಕ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಮರ್ದಾಳ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಹೆಗ್ಡೆ ಅವರು ಮಾತನಾಡಿ, “ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡುವವರು ಶ್ರದ್ಧೆ, ಶುದ್ಧತೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಲೋಪ, ತಪ್ಪುಗಳು ಆಗದಂತೆ ಎಚ್ಚರ ವಹಿಸಬೇಕು. ಭಜನೆ ಇರುವ ಸ್ಥಳದಲ್ಲಿ ವಿಭಜನೆಗೆ ಜಾಗವೇ ಇಲ್ಲ. ಭಜನೆಗೆ ಜಾತಿ, ಧರ್ಮ, ಲಿಂಗ ಎಂಬ ಬೇಧಭಾವಗಳಿಲ್ಲ. ಭಜನೆ ನಮ್ಮ ಸಂಸ್ಕಾರ, ಸಂಪ್ರದಾಯ ಮತ್ತು ಧರ್ಮವನ್ನು ಉಳಿಸುವ ಶಕ್ತಿಯಾಗಿದೆ. ನಿರಂತರ ಭಜನೆಯಿಂದ ಮನಸ್ಸಿಗೆ ಶಾಂತಿ, ದೇಹಕ್ಕೆ ಆರೋಗ್ಯ ಹಾಗೂ ಸಮಾಜಕ್ಕೆ ಏಕತೆ ದೊರೆಯುತ್ತದೆ” ಎಂದು ಹೇಳಿದರು.

ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೆ.ಎಸ್. ದುರ್ಗಾಶ್ರೀ ಮಾತನಾಡಿ, “ಇಂದು ಇಲ್ಲಿ ನಡೆಯುತ್ತಿರುವ ಕುಣಿತ ಭಜನಾ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ದೇವಸ್ಥಾನ ವಠಾರಕ್ಕೆ ಮಾತ್ರ ಸೀಮಿತವಾಗದೆ, ಪ್ರತೀ ಮನೆಯಲ್ಲೂ ಭಜನೆ ಮಾಡುವ ಸಂಸ್ಕೃತಿ ರೂಢಿಯಾದಾಗ ಮಾತ್ರ ಇಂತಹ ಕಾರ್ಯಕ್ರಮಗಳ ಸಾರ್ಥಕತೆ ಸಿಗುತ್ತದೆ. ಭಜನೆಯ ಮೂಲಕ ಮುಂದಿನ ತಲೆಮಾರಿಗೆ ಧಾರ್ಮಿಕ ಮೌಲ್ಯಗಳನ್ನು ತಲುಪಿಸಬೇಕು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಗೆಳೆಯರ ಬಳಗದ ಅಧ್ಯಕ್ಷ ಸಂತೋಷ್ ಶೆಟ್ಟಿ ಪಟ್ಟೆ ವಹಿಸಿದ್ದರು.

ವೇದಿಕೆಯಲ್ಲಿ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಸುಬ್ರಹ್ಮಣ್ಯ ಶಬರಾಯ, ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ, ಕಾಂತಪ್ಪ ಗೌಡ ಪೂವಾಜೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೆಲ್ಯಾಡಿಯಲ್ಲಿ ಫೆ.1ರಂದು ನಡೆಯಲಿರುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಹರೀಶ್ ಆಮ್ಮುಂಜೆ ಸ್ವಾಗತಿಸಿದರು. ಶಿವಪ್ರಸಾದ್ ವರದಿ ವಾಚಿಸಿದರು. ಸುರೇಶ್ ಪಡಿಪಂಡ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!