ಕೊಕ್ಕಡ: ಹಿಂದೂ ಧರ್ಮದ ಶಕ್ತಿ ಪ್ರತಿಧ್ವನಿಸಿದ ಅರಸಿನಮಕ್ಕಿ ಮಂಡಲ ಹಿಂದೂ ಸಂಗಮ

ಶೇರ್ ಮಾಡಿ

ಕೊಕ್ಕಡ: ಅರಸಿನಮಕ್ಕಿ ಮಂಡಲದ ವ್ಯಾಪ್ತಿಯ ಹತ್ಯಡ್ಕ, ಶಿಶಿಲ, ಶಿಬಾಜೆ ಹಾಗೂ ರೆಖ್ಯ ಗ್ರಾಮಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹಿಂದೂ ಸಂಗಮ ಕಾರ್ಯಕ್ರಮ ಇಲ್ಲಿನ ಕೇಂದ್ರ ಮೈದಾನದಲ್ಲಿ ಜ.25ರಂದು ಭಕ್ತಿಭಾವ, ಸಂಸ್ಕಾರ ಹಾಗೂ ಶಿಸ್ತಿನೊಂದಿಗೆ ವೈಭವಯುತವಾಗಿ ನಡೆಯಿತು.

ಹಿಂದೂ ಧರ್ಮದ ಏಕತೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಾರುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದ ಅಂಗವಾಗಿ ಭವ್ಯ ಮೆರವಣಿಗೆ ನಡೆಯಿತು. ಕೇಸರಿ ಧ್ವಜಗಳು, ಧಾರ್ಮಿಕ ಘೋಷಣೆಗಳು ಹಾಗೂ ಶಿಸ್ತಿನ ಮೆರವಣಿಗೆಯ ಮೂಲಕ ಹಿಂದೂ ಧರ್ಮದ ಶಕ್ತಿ ಮತ್ತು ಒಗ್ಗಟ್ಟು ಸಾರ್ವಜನಿಕರ ಗಮನ ಸೆಳೆಯಿತು.

ಸಭಾ ಕಾರ್ಯಕ್ರಮವು ಹಿಂದೂ ಸಂಗಮ ಅರಸಿನಮಕ್ಕಿ ಮಂಡಲ ಆಯೋಜನ ಸಮಿತಿಯ ಸಂಯೋಜಕ ರಾಘವೇಂದ್ರ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕುಟುಂಬ ಪ್ರಭೋದನ್ ವಿಭಾಗ ಸಂಯೋಜಕ ಗುರುರಾಜ್ ಕೋಟೇಶ್ವರ “ಅವಿಭಕ್ತ ಕುಟುಂಬವೇ ಹಿಂದೂ ಧರ್ಮದ ಅತಿದೊಡ್ಡ ಶಕ್ತಿ. ಕುಟುಂಬದಲ್ಲಿ ಯಾರೂ ಬೇರ್ಪಟ್ಟು ಹೋಗದೆ ಒಟ್ಟಾಗಿ ಬದುಕುವ ಸಂಸ್ಕಾರ ನಮ್ಮ ಧರ್ಮದ ಮೂಲ. ಇತ್ತೀಚಿನ ನಗರ ವ್ಯಾಮೋಹ ಹಾಗೂ ಆಧುನಿಕ ಜೀವನಶೈಲಿಯಿಂದ ಕುಟುಂಬ ವಿಚ್ಛೇದನ ಹೆಚ್ಚಾಗುತ್ತಿದೆ. ಇದು ಹಿಂದೂ ಧರ್ಮ ಹಾಗೂ ಸಮಾಜಕ್ಕೆ ಮಾರಕವಾಗುವ ಅಪಾಯವಿದೆ. ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ವಾಮನ ತಾಮನ್ಕರ್, ಚೇತನ ಚಂದ್ರಶೇಖರ, ಕಿರಣ್ ಚಂದ್ರ ಪುಷ್ಪಗಿರಿ, ದಿನೇಶ್ ಚಾರ್ಮಾಡಿ ಹಾಗೂ ಅಶೋಕ್ ಪತ್ತಿಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಹಿಂದೂ ಸಂಗಮದ ಮಹತ್ವವನ್ನು ಪ್ರತಿಪಾದಿಸಿದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಅವರು ಹಿಂದೂ ಸಂಗಮದಲ್ಲಿ ಭಾಗವಹಿಸಿದ ಪ್ರತಿಯೊಂದು ಮನೆಯ ಸದಸ್ಯರಿಗೆ ಭಗವದ್ಗೀತೆಯ ಪ್ರತಿಗಳನ್ನು ವಿತರಿಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದರು.

ಹಿಂದೂ ಸಂಗಮ ತಾಲೂಕು ಆಯೋಜನ ಸಮಿತಿ ಸದಸ್ಯ ವೃಶಾಂಕ್ ಖಾಡಿಲ್ಕರ್ ಸ್ವಾಗತಿಸಿದರು. ತ್ಯಾಂಪಣ್ಣ ಶೆಟ್ಟಿಗಾರ್ ಹಾಗೂ ರೇಣುಕಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಕೆ. ಹೊಸ್ತೋಟ ವಂದಿಸಿದರು.

Leave a Reply

error: Content is protected !!