ಕಡಬ ತಾಲೂಕು ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ 54ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವು ಫೆಬ್ರವರಿ 15, 2026ರಂದು ಭಕ್ತಿಭಾವಪೂರ್ಣವಾಗಿ ಹಾಗೂ ವೈಭವಯುತವಾಗಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ದೇವಸ್ಥಾನ ಸಮಿತಿ ಮಹೋತ್ಸವವನ್ನು ಶ್ರದ್ಧಾ–ಭಕ್ತಿಗಳೊಂದಿಗೆ ಆಯೋಜಿಸಿದೆ.
ಮಹೋತ್ಸವದ ಅಂಗವಾಗಿ ಬೆಳಿಗ್ಗೆ 7.00 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಪುಣ್ಯಾಹವಾಚನ, ಉಷಾಪೂಜೆ, ಭಾಗವತ ಪಾರಾಯಣ, ಗಣಹೋಮ, ನವಕಲಶಾಭಿಷೇಕ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಸೇರಿದಂತೆ ಹಲವು ಪೂಜಾ ವಿಧಿವಿಧಾನಗಳು ನಡೆಯಲಿವೆ. ಮಧ್ಯಾಹ್ನ ಮಹಾಪೂಜೆಯ ನಂತರ ಭಕ್ತರಿಗಾಗಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6.00 ಗಂಟೆಗೆ ಉತ್ಸವಮೂರ್ತಿ ನಟರಾಜ ದೇವರಿಗೆ ತಾಳಿ–ದೀಪಾಲಂಕಾರ ಭೂಷಿತ ಮೆರವಣಿಗೆ ಶ್ರೀ ಗಂಗಾಧರೇಶ್ವರ ದೇವಸ್ಥಾನದಿಂದ ಹೊರಟು ಇಚ್ಲಂಪಾಡಿ ಬೀಡು ಶ್ರೀ ಉಳ್ಳಾಕ್ಲು ದೈವಸ್ಥಾನದ ತನಕ ಸಾಗಲಿದೆ.ನಂತರ ದೀಪಾರಾಧನೆ ಹಾಗೂ ಸಂಧ್ಯಾಪೂಜೆ ಪೂಜೆ ನೆರವೇರಲಿದೆ.
ಸಂಜೆ 7.00 ಗಂಟೆಯಿಂದ ಮರುದಿನ ಬೆಳಿಗ್ಗೆ 5.00 ಗಂಟೆಯವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮಗಳು ಜರುಗಲಿವೆ. ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ (ನೇರ್ಲ–ಇಚ್ಲಂಪಾಡಿ), ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ (ಬೀಡು–ಇಚ್ಲಂಪಾಡಿ), ಶ್ರೀ ಮಂಜುಶ್ರೀ ಭಜನಾ ಮಂಡಳಿ (ಕೆಡಂಬೇಲಿ–ಇಚ್ಲಂಪಾಡಿ), ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿ (ಕುರಿಯಾಳಕೊಪ್ಪ) ಹಾಗೂ ಶ್ರೀ ಗೌರಿ ಶಂಕರ ಭಜನಾ ಮಂಡಳಿ (ಮಾನಡ್ಕ–ಇಚ್ಲಂಪಾಡಿ) ಭಜನೆಗಳ ಮೂಲಕ ಭಕ್ತರನ್ನು ಭಕ್ತಿರಸದಲ್ಲಿ ಶೋಭಿಸಲಿವೆ.
ರಾತ್ರಿ 8.30ರಿಂದ 9.30ರವರೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 12.00ರಿಂದ 1.00 ಗಂಟೆಯವರೆಗೆ ಮಹಾಶಿವರಾತ್ರಿ ವಿಶೇಷ ಪೂಜೆ ನೆರವೇರಲಿದೆ. ನಂತರ ಪ್ರಸಾದ ವಿತರಣೆ ನಡೆಯಲಿದೆ. ದೇವಸ್ಥಾನದ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲಾಗಿದ್ದು, ಭಕ್ತರಿಗಾಗಿ ಅಗತ್ಯ ಸೌಲಭ್ಯಗಳನ್ನೂ ಸಮರ್ಪಕವಾಗಿ ಒದಗಿಸಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.