ಹಳ್ಳಿಂಗೇರಿಯಲ್ಲಿ ಮಂಗ–ನಾಯಿ ದಾಳಿ ಭೀತಿ: ಅರಣ್ಯ ಇಲಾಖೆ ಕಾರ್ಯಾಚರಣೆ; ಮಂಗನ ಸೆರೆ

ಶೇರ್ ಮಾಡಿ

ಕೊಕ್ಕಡ: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಶಾಲಾ ಮಕ್ಕಳ ಮೇಲೆ ಮಂಗ ಹಾಗೂ ನಾಯಿಗಳ ದಾಳಿ ನಡೆಯುತ್ತಿದ್ದು, ಸಾರ್ವಜನಿಕಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ಗಂಭೀರವಾಗುತ್ತಿದ್ದಂತೆ ಶಾಲಾ ಮುಖ್ಯಶಿಕ್ಷಕರೂ ಸೇರಿದಂತೆ ಗ್ರಾಮಸ್ಥರು ಕೊಕ್ಕಡ ಗ್ರಾಮ ಪಂಚಾಯಿತಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ದೂರಿನ ಆಧಾರದ ಮೇಲೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಳೆದ 10 ರಿಂದ 15 ದಿನಗಳ ಅವಧಿಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳುವ ವೇಳೆ ಮಂಗ ಮತ್ತು ನಾಯಿಗಳು ಹಠಾತ್ ದಾಳಿ ನಡೆಸಿದ ಪರಿಣಾಮ ಕೆಲವರು ಓಡುವಾಗ ಬಿದ್ದು ಗಾಯಗೊಂಡ ಘಟನೆಗಳು ವರದಿಯಾಗಿದ್ದವು.

ಸ್ಥಳೀಯರ ಸಹಕಾರದೊಂದಿಗೆ ಅರಣ್ಯ ಇಲಾಖೆಯ ತಂಡ ಬಲೆ ಬೀಸಿ ಮಂಗವನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು. ಬಳಿಕ ಮಂಗವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು. ದಾಳಿಯಿಂದ ಭೀತಿಗೊಳಗಾಗಿದ್ದ ಮಕ್ಕಳು ಹಾಗೂ ಪೋಷಕರು ತಾತ್ಕಾಲಿಕವಾಗಿ ನಿಟ್ಟಿಸಿರು ಬಿಟ್ಟರು.

ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಗಸ್ತು ವನಪಾಲಕ ದಿವಾಕರ, ಸಿಬ್ಬಂದಿ ವರ್ಗ, ಉರಗ ತಜ್ಞ ತೇಜಸ್ ಪುತ್ತೂರು, ಝಕಾರಿಯ ಉಪ್ಪಿನಂಗಡಿ ಅವರು ಭಾಗವಹಿಸಿದರು.

Leave a Reply

error: Content is protected !!