ಶಿಬಾಜೆ ಶ್ರೀಧರ ಕೊಲೆ ಪ್ರಕರಣಕ್ಕೆ ಮರು ತನಿಖೆ — ರಾಜ್ಯ ಸರ್ಕಾರದಿಂದ ಎಸ್‌ಐಟಿ ನೇಮಕ, ಆದೇಶ ಹೊರಡಿಕೆ

ಶೇರ್ ಮಾಡಿ

ಕೊಕ್ಕಡ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣ ಮರು ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ಎಸ್‌ಐಟಿ ತಂಡ ರಚಿಸಿ ಆದೇಶ ಹೊರಡಿಸಿದೆ. ಪ್ರಕರಣದ ಸತ್ಯಾಸತ್ಯತೆ ಬಹಿರಂಗಗೊಳ್ಳಬೇಕೆಂಬ ಒತ್ತಾಯಗಳು ಮತ್ತೊಮ್ಮೆ ತೀವ್ರಗೊಂಡಿರುವ ಸಂದರ್ಭದಲ್ಲಿ ಈ ಕ್ರಮ ಮಹತ್ವ ಪಡೆದಿದೆ.

ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಂಬೂ ರಾವ್ ಅವರ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ತಂಡದಲ್ಲಿ ಉಡುಪಿ ಜಿಲ್ಲಾ ಎಸ್‌ಪಿ ಹರಿರಾವ್ ಶಂಕರ್ ಐಪಿಎಸ್ ಹಾಗೂ ಡಿವೈಎಸ್‌ಪಿ ಎಂ.ಆರ್. ಹರೀಶ್ ಅವರನ್ನು ಸೇರಿಸಲಾಗಿದೆ.

ಘಟನೆ ಹಿನ್ನೆಲೆ
2022ರ ಡಿಸೆಂಬರ್ 18ರಂದು ಶಿಬಾಜೆ ಪ್ರದೇಶದ ತೋಟದ ಒಳಗೆ ಕೆಲಸ ಮಾಡುತ್ತಿದ್ದ ಶ್ರೀಧರನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಆರಂಭದಿಂದಲೂ ಹಲವಾರು ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಪೊಲೀಸ್ ತನಿಖೆ ಸಮರ್ಪಕವಾಗಿ ನಡೆಯದೆ ಪ್ರಕರಣ ಗೂಢವಾಗುತ್ತಿದ್ದಂತೆ, ಬೆಳ್ತಂಗಡಿ ಮತ್ತು ಸುತ್ತಮುತ್ತಲಿನ ದಲಿತ ಸಂಘಟನೆಗಳು ಬೃಹತ್ ಹೋರಾಟಗಳನ್ನು ನಡೆಸಿ ಮರು ತನಿಖೆಗೆ ಎಂದಿನಂತೆ ಒತ್ತಾಯ ಮಾಡುತ್ತವ ಬಂದಿದ್ದವು.

ನ್ಯಾಯಾಲಯದ ಹಸ್ತಕ್ಷೇಪ
ಪೊಲೀಸರ ತನಿಖೆ ತೃಪ್ತಿಕರವಾಗಿಲ್ಲವೆಂದು ಆರೋಪಿಸಿ ಹರೀಶ್ ಮುಗೇರ ಅವರು ರಾಜ್ಯ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ವಿಚಾರಣೆಯ ಬಳಿಕ ನ್ಯಾಯಾಲಯವು ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು.

ಎಸ್‌ಐಟಿ ರಚನೆ:
ನ್ಯಾಯಾಲಯದ ನಿರ್ದೇಶನದಂತೆ, ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ. ಎಂ.ಎ. ಸಲೀಂ ಅವರು ಅಧಿಕೃತವಾಗಿ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. ಈಗ ಪ್ರಕರಣದ ತನಿಖೆ ಸಂಪೂರ್ಣವಾಗಿ ಈ ವಿಶೇಷ ತಂಡದ ವಶದಲ್ಲಿದೆ.

Leave a Reply

error: Content is protected !!