


ಬೆಳ್ತಂಗಡಿ: ಅಂಗಳಕ್ಕೆ ನಾಯಿ ತಂದು ಹಾಕಿದ ಚೆಂಡಿನಂಥ ವಸ್ತುವನ್ನು ಸ್ಫೋಟಕವೆಂದು ಗೊತ್ತಿಲ್ಲದ ಬಾಲ್ ಎಂದು ಭ್ರಮಿಸಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಭಯಂಕರ ಸದ್ದಿನಲ್ಲಿ ಸ್ಫೋಟಗೊಂಡು ಬಾಲಕ ಗಾಯಗೊಂಡ ಘಟನೆ ಸಂಭವಿಸಿದ ಮನೆಗೆ ಗುರುವಾರ ಸಂಜೆ ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು, ಶುಕ್ರವಾರ ಮಧ್ಯಾಹ್ನ ಹೊತ್ತಿಗೆ ಬಾಂಬ್ ಸ್ಕ್ಯಾಡ್ ಭೇಟಿ ನೀಡಿ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಎಂಬಾತ ಮನೆಯಂಗಳದಲ್ಲಿ ಬುಧವಾರ ಸಂಜೆ ಸಂಭವಿಸಿದ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದ. ಚೆಂಡಿನಂಥ ವಸ್ತುವೊಂದನ್ನು ಮನೆಯ ನಾಯಿ ಎಲ್ಲಿಂದಲೋ ಕಚ್ಚಿಕೊಂಡು ಬಂದು ಅಂಗಳದ ಬದಿಯಲ್ಲಿ ಹಾಕಿದ್ದು ಇದು ಏನೆಂದು ತಿಳಿಯದ ಮುಗ್ಧ ಮಕ್ಖಳಿಬ್ಬರು ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಪತ್ತೆಯಾದ ಚೆಂಡಿನಂಥ ವಸ್ತುವೊಂದನ್ನು ಹೆಕ್ಕಿಕೊಂಡು ಬಂದ ಬಾಲಕರಿಬ್ಬರು ಕ್ರಿಕೆಟ್ ಆಟವಾಡಿದ್ದಾರೆ. ಒಬ್ಬ ಬೌಲಿಂಗ್ ಮಾಡಿದ್ದು ಇನ್ನೊಬ್ಬ ಬ್ಯಾಟಿಂಗ್ ಮಾಡಿದ ಸಂದರ್ಭ ಸ್ಫೋಟಗೊಂಡಿದ್ದು ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ ಎಂಬಾತ ಗಾಯಗೊಂಡಿದ್ದ. ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಫೋಟಗೊಂಡ ಮನೆಗೆ ಧರ್ಮಸ್ಥಳ ಎಸ್ ಐ ಸಮರ್ಥ್ ಗಾಣಿಗೇರ್, ಸೋಕೋ ವಿಭಾಗದ ಸುಮಂತ್, ಆಶಿಫ್ ಅವರುಗಳನ್ನೊಳಗೊಂಡ ಪೊಲೀಸರ ತಂಡ ಗುರುವಾರಸಂಜೆ ಭೇಟಿ ನೀಡಿ ಮನೆಯವರಿಂದ ಘಟನೆಯ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಸ್ಫೋಟಕದ ಅವಶೇಷ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ದಿನೇಶ್ ಖಂಡಿಗ, ಸ್ಥಳೀಯರಾದ ಸಂತೋಷ್ ಬಲಿಪೆ ಇದ್ದರು.





