


ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್ಐ ಸುತೇಶ್ ಕೆ.ಪಿ. ಅವರು ಸಿಬ್ಬಂದಿಗಳೊಂದಿಗೆ ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮ, ಹೊಸವಕ್ಲು ಪ್ರದೇಶದಲ್ಲಿ ದಾಳಿ ನಡೆಸಿದರು. ಹೆಚ್. ಅಬ್ದುಲ್ ರಹಿಮಾನ್ ಅವರ ಮನೆಯತ್ತ ಪೊಲೀಸರು ತಲುಪುವಷ್ಟರಲ್ಲಿ ಆವರಣದಿಂದ ಇಬ್ಬರು ವ್ಯಕ್ತಿಗಳು ಓಡಿ ಪರಾರಿಯಾಗಿದ್ದರು.
ಪರಿಶೀಲನೆ ವೇಳೆ ಮನೆಯ ಆವರಣದಲ್ಲಿ ಪ್ಯಾಕೆಟ್ ಮಾಡಿಡಲಾಗಿದ್ದ ಗೋಮಾಂಸ, ಅಲ್ಲದೇ ಸಮೀಪ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲೂ ಮಾಂಸದ ಪ್ಯಾಕೆಟ್ಗಳು ಪತ್ತೆಯಾಗಿದ್ದು ಒಟ್ಟು 56 ಕೆ.ಜಿ ಗೋಮಾಂಸ ವಶಪಡಿಸಿಕೊಳ್ಳಲಾಯಿತು. ಜೊತೆಗೆ ತೂಕದ ಯಂತ್ರ, ಮೊಬೈಲ್ ಫೋನ್, ಅಟೋರಿಕ್ಷಾ ಸೇರಿದಂತೆ ಇನ್ನಿತರೆ ವಸ್ತುಗಳನ್ನೂ ಪೊಲೀಸರು ಜಪ್ತಿ ಮಾಡಿದರು.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 27/2026ರಂತೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರ ಕಲಂ 4 ಮತ್ತು 12 ಹಾಗೂ BNS 2023ರ ಕಲಂ 3(5) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಪ್ರಕರಣದ ಆರೋಪಿ ಹೆಚ್. ಅಬ್ದುಲ್ ರಹಿಮಾನ್ ಅವರು ಜಾನುವಾರು ವಧೆಗೆ ಬಳಕೆ ಮಾಡಿದ್ದ ಮನೆಯ ಆವರಣವನ್ನು ಜಪ್ತಿಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





