





ನೆಲ್ಯಾಡಿ: ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿ ಯುವಕರಿಗೆ “ಕಲಿಕೆಯೊಂದಿಗೆ ಗಳಿಕೆ” ಅವಕಾಶವನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟ್ರೀಯ ಅಪ್ರೆಂಟಿಸ್ ಜಾಗೃತಿ ಕಾರ್ಯಕ್ರಮವು ನೆಲ್ಯಾಡಿಯ ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಸರಕಾರಿ ಮಹಿಳಾ ಐಟಿಐ ಸಂಸ್ಥೆಯ ಪ್ರಾಚಾರ್ಯ ಶಿವಕುಮಾರ್ ಮಾತನಾಡಿ, ದೇಶದ ಯುವಕರಿಗೆ ಕೌಶಲ್ಯಭರಿತ ಭವಿಷ್ಯವನ್ನು ನಿರ್ಮಿಸಲು ಅಪ್ರೆಂಟಿಸ್ ತರಬೇತಿ ಮಹತ್ವದ ಪಾತ್ರವಹಿಸುತ್ತದೆ ಎಂದು ತಿಳಿಸಿದರು. ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ಯೋಜನೆಯಡಿಯಲ್ಲಿ ಯುವಕರಿಗೆ ಕಲಿಕೆಯ ಜೊತೆಗೆ ಹಣ ಸಂಪಾದಿಸುವ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಅಪ್ರೆಂಟಿಸ್ ತರಬೇತಿ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಯಾವ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ತರಬೇತಿ ಮುಗಿದ ನಂತರ ಒಂದು ವರ್ಷದ ಅಪ್ರೆಂಟಿಸ್ ತರಬೇತಿ ಬಹಳ ಮುಖ್ಯವಾಗಿದ್ದು, ಇದು ಮುಂದಿನ ಉದ್ಯೋಗ ಜೀವನಕ್ಕೆ ಉತ್ತಮ ಆಧಾರವಾಗುತ್ತದೆ. ಐಟಿಐ ವಿದ್ಯಾರ್ಥಿಗಳು ತರಬೇತಿ ಅವಧಿಯಲ್ಲೇ ಉದ್ಯಮ ಅಥವಾ ಕಂಪನಿಗಳಲ್ಲಿ ನೇರವಾಗಿ ಕೆಲಸ ಮಾಡುತ್ತಾ ಕಲಿಯುವ ‘ಉದ್ಯೋಗದಲ್ಲೇ ತರಬೇತಿ’ ಮೂಲಕ ಪ್ರಾಯೋಗಿಕ ಅನುಭವವನ್ನು ಪಡೆಯಬಹುದು. ಬಳಿಕ ಅಪ್ರೆಂಟಿಸ್ ತರಬೇತಿಯ ಮೂಲಕ ಉತ್ತಮ ಸಂಭಾವನೆಯ ಉದ್ಯೋಗಗಳನ್ನು ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಲ್ಲಿ ಮಾತ್ರವಲ್ಲದೆ ದೇಶ-ವಿದೇಶದ ಹೆಸರಾಂತ ಕೈಗಾರಿಕಾ ಸಂಸ್ಥೆಗಳಲ್ಲಿ ಪಡೆಯಲು ಅವಕಾಶ ಸಿಗುತ್ತದೆ ಎಂದು ಅವರು ತಿಳಿಸಿದರು.
ಒಬ್ಬ ವಿದ್ಯಾರ್ಥಿ ಐಟಿಐಗೆ ಸೇರುವುದರಿಂದ ಆರಂಭಿಸಿ, ತರಬೇತಿ ಅವಧಿಯಲ್ಲೇ ಉದ್ಯೋಗದಲ್ಲೇ ತರಬೇತಿ ಪಡೆಯುವುದು, ನಂತರ ಅಪ್ರೆಂಟಿಸ್ ತರಬೇತಿಗೆ ಮಾರ್ಗದರ್ಶನ ನೀಡುವುದು ಹಾಗೂ ಉತ್ತಮ ಸಂಬಳದ ಉದ್ಯೋಗ ಪಡೆಯಲು ಸಹಕಾರ ನೀಡುವುದು ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಎಸ್ಎಸ್ಎಲ್ಸಿ, ಪಿಯುಸಿ ಹಾಗೂ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ಸ್ಕಿಲ್ ಇಂಡಿಯಾ ಯೋಜನೆಯ ಮೂಲ ಧ್ಯೇಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತರಬೇತಿ ಅಧಿಕಾರಿ ಜಾನ್ ಪಿ.ಎಸ್ ಸ್ವಾಗತಿಸಿದರು. ಸಂಸ್ಥೆಯ ಪ್ರಾಚಾರ್ಯ ಸಜಿ ಕೆ. ತೋಮಸ್ ವಂದಿಸಿದರು.





