





ನೆಲ್ಯಾಡಿ: ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ದಿವಂಗತ ಪರಮಪೂಜ್ಯ ಬಿಷಪ್ ಪೋಳಿಕಾರ್ಪಸ್ ಮಾರ್ ಗೀವರ್ಗೀಸ್ ಅವರ 15ನೇ ಪುಣ್ಯಸ್ಮರಣ ಕಾರ್ಯಕ್ರಮವು ಶುಕ್ರವಾರದಂದು ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಬಿಷಪ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ಅವರ ಆತ್ಮಶಾಂತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾತನಾಡಿದ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು, ಬಿಷಪ್ ಪೋಳಿಕಾರ್ಪಸ್ ಮಾರ್ ಗೀವರ್ಗೀಸ್ ಅವರ ಜೀವನ ಸಾಧನೆಗಳನ್ನು ಸ್ಮರಿಸಿದರು. ಅವರು ಧರ್ಮಗುರುಗಳಾಗಿ ಕೇವಲ 28ನೇ ವಯಸ್ಸಿನಲ್ಲೇ ಕೇರಳದಿಂದ ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಹಲವು ಚರ್ಚ್‌ಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಬಳಿಕ 1962ರಲ್ಲಿ ಹೊನ್ನಾವರದಲ್ಲಿರುವ ಸೈಂಟ್ ಆಂಟೋನಿಸ್ ಚಾರಿಟೇಬಲ್ ಸಂಸ್ಥೆಯಲ್ಲಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದ ಅವರು, 1967ರಲ್ಲಿ ಅಲ್ಲಿ ಪ್ರೌಢ ಶಿಕ್ಷಣವನ್ನು ಆರಂಭಿಸಿದರು. ನಂತರ 1975ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉದನೆಯಲ್ಲಿ ಸೈಂಟ್ ಆಂಟೋನಿಸ್ ಹೆಸರಿನಲ್ಲಿ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ತದನಂತರ 1978ರಲ್ಲಿ ನೆಲ್ಯಾಡಿಯಲ್ಲಿ ಸಂತ ಜಾರ್ಜ್ ಪ್ರೌಢಶಾಲೆಯನ್ನು ಸ್ಥಾಪಿಸಿ ಶಿಕ್ಷಣದ ಬೆಳಕನ್ನು ಹಂಚಿದರು. 1987ರಲ್ಲಿ ಪದವಿಪೂರ್ವ ಕಾಲೇಜನ್ನು ಆರಂಭಿಸಿ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಿದರು. 2003ರಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಿಕ್ಷಣವನ್ನು ಆರಂಭಿಸುವ ಮೂಲಕ ಸಂಸ್ಥೆಯ ವಿಸ್ತರಣೆಗೆ ಕಾರಣರಾದರು ಎಂದು ಅವರು ವಿವರಿಸಿದರು. ಈ ನಡುವೆ 1990ರಲ್ಲಿ ಅವರು ಧರ್ಮಧ್ಯಕ್ಷರಾಗಿ ಪದೋನ್ನತಿ ಹೊಂದಿದರು. ಶಿಕ್ಷಣ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಅವರು 2011ರಲ್ಲಿ ನಿಧನರಾದರು. ಅವರೊಂದಿಗೆ ಕಳೆದ ಅನುಭವಗಳು ಹಾಗೂ ಸಮಾಜದ ಮೇಲಿನ ಅವರ ಅಪಾರ ಕಾಳಜಿಯನ್ನು ಈ ಸಂದರ್ಭದಲ್ಲಿ ಅವರು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಏಲಿಯಾಸ್ ಎಂ.ಕೆ., ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಎಂ.ವೈ.ತೋಮಸ್, ಶಿಕ್ಷಕ ವೃಂದ ಹಾಗೂ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.





