





ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶಿಬಾಜೆ ಕಾರ್ಯಕ್ಷೇತ್ರದ ತ್ರೈಮಾಸಿಕ ಒಕ್ಕೂಟ ಸಭೆಯಲ್ಲಿ ಹಾವುಗಳ ಗುರುತಿಸುವಿಕೆ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಹಾವು ಕಡಿತವಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ–ಅರಸಿನಮಕ್ಕಿ ಇದರ ಸದಸ್ಯ ರಮೇಶ್ ಬೈರಕಟ್ಟ ಅವರು ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ಉರಗ ರಕ್ಷಕ ಸುರೇಶ್ ಶಿಬಾಜೆ ಅವರ ಮಾರ್ಗದರ್ಶನದಲ್ಲಿ ಹಾವುಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಉದ್ದೇಶಗಳು, ಕಾರ್ಯಪದ್ಧತಿ ಹಾಗೂ ಪ್ರಕೃತಿ ವಿಕೋಪ ಅಥವಾ ತುರ್ತು ಸಂದರ್ಭಗಳಲ್ಲಿ ಘಟಕ ಕೈಗೊಳ್ಳುವ ಸೇವಾ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಭೆಯಲ್ಲಿ ವಿಷಪೂರಿತ ಹಾಗೂ ವಿಷರಹಿತ ಹಾವುಗಳನ್ನು ಹೇಗೆ ಗುರುತಿಸಬೇಕು ಎಂಬುದರ ಕುರಿತು ಸಚಿತ್ರ ವಿವರಣೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾವುಗಳ ಸ್ವಭಾವ, ಅವುಗಳ ವಾಸಸ್ಥಾನ ಹಾಗೂ ಅವುಗಳನ್ನು ಎದುರಿಸುವ ಸಂದರ್ಭಗಳಲ್ಲಿ ಜನರು ಪಾಲಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಸದಸ್ಯರಿಗೆ ತಿಳಿಸಲಾಯಿತು.
ಇದರ ಜೊತೆಗೆ ಹಾವುಗಳು ಮನೆಗಳ ಒಳಗೆ ಪ್ರವೇಶಿಸದಂತೆ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು, ತೋಟಗಳಲ್ಲಿ ಹಾಗೂ ಮನೆ ಆವರಣದಲ್ಲಿ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕಾದ ವಿಧಾನಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಹಾವು ಕಡಿತವಾದ ಸಂದರ್ಭದಲ್ಲಿ ತಕ್ಷಣ ತೆಗೆದುಕೊಳ್ಳಬೇಕಾದ ಪ್ರಥಮ ಚಿಕಿತ್ಸೆ, ತಪ್ಪಾಗಿ ಕೈಗೊಳ್ಳುವ ಕ್ರಮಗಳಿಂದ ಉಂಟಾಗುವ ಅಪಾಯಗಳು ಹಾಗೂ ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವ ಅಗತ್ಯತೆಯ ಬಗ್ಗೆ ಸಹ ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಬಾಜೆ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಟಿ.ಆರ್., ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಎಚ್.ಎಸ್. ಚೆನ್ನಪ್ಪಗೌಡ, ವಲಯಾಧ್ಯಕ್ಷ ಗಣೇಶ್ ಗೌಡ, ವಲಯ ಮೇಲ್ವಿಚಾರಕಿ ಶಶಿಕಲಾ, ಬೆಳ್ತಂಗಡಿ ತಾಲೂಕು ಶೌರ್ಯ ಮಾಸ್ಟರ್ ಅವಿನಾಶ್ ಭಿಡೆ, ಶಿಶಿಲ–ಅರಸಿನಮಕ್ಕಿ ಶೌರ್ಯ ಸಂಯೋಜಕಿ ರಶ್ಮಿತಾ ಟಿ.ಬಿ., ಶಿಬಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯೋಗೀಶ್, ಗ್ರಾಹಕ ಸೇವಾ ಕೇಂದ್ರದ ದಿವ್ಯಾ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.





