





ನೆಲ್ಯಾಡಿ: ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ರಂಗಪೂಜೆ ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮವು ಭಾನುವಾರದಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಪುರೋಹಿತರಾದ ಆದಿತ್ಯ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಗುರುಪ್ರಸಾದ್ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು
ಕಾರ್ಯಕ್ರಮವು ಬೆಳಿಗ್ಗೆ ದೇವತಾ ಪ್ರಾರ್ಥನೆಯೊಂದಿಗೆ ಆರಂಭವಾಗಿ, ಬಳಿಕ ಮಹಾಗಣಪತಿ ಹೋಮ, ಕಲಶ ಪೂಜೆ ನಂತರ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ, ನೆಲ್ಯಾಡಿ ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾಸಂಘ ಇವರಿಂದ “ಶಲ್ಯ ನಿರ್ಗಮನ” ತಾಳಮದ್ದಲೆ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ದೇವರಿಗೆ ಕಲಶ ಅಭಿಷೇಕ, ನಾಗ ದೇವರಿಗೆ ಹಾಗೂ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ, ಸಂಜೆ 5 ಗಂಟೆಯಿಂದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ಬಳಿಕ ಶ್ರೀ ದೇವರಿಗೆ ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಂತರ ದೈವಗಳ ನೇಮೋತ್ಸವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸುಬ್ರಹ್ಮಣ್ಯ ಶಬರಾಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕೆ. ಎಸ್., ಕಾರ್ಯದರ್ಶಿ ಕಾಂತಪ್ಪ ಗೌಡ ಪೂವಾಜೆ, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ಬೀದಿಮಜಲು, ಕೋಶಾಧಿಕಾರಿ ವೆಂಕಟರಮಣ ಆರ್ ಕೊಲ್ಯೊಟ್ಟು, ಶ್ರೀಪತಿ ಶಬರಾಯ ಪಡುಬೆಟ್ಟು ಹಾಗೂ ಅಭಿವೃದ್ಧಿ ಮಂಡಳಿಯ ಸಮಿತಿಯ ಪದಾಧಿಕಾರಿಗಳು, ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಊರ, ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.





