





ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರೀ ಪ್ರಮಾಣದ ಡೀಸೆಲ್ನ್ನು ಪೊಲೀಸರು ಪತ್ತೆಹಚ್ಚಿದ್ದು, ಸುಮಾರು 4,175 ಲೀಟರ್ ಡೀಸೆಲ್ ಹಾಗೂ ಸಂಬಂಧಿತ ಸಾಮಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಮಾ.9ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ. ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಮಾಹಿತಿ ಆಧಾರವಾಗಿ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು, ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಪ್ರದೇಶದಲ್ಲಿರುವ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.
ತಪಾಸಣೆ ವೇಳೆ ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್ಗಳು ಹಾಗೂ 35 ಲೀಟರ್ ಸಾಮರ್ಥ್ಯದ 5 ಕ್ಯಾನ್ಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ಸಂಗ್ರಹಿಸಿರುವುದು ಪತ್ತೆಯಾಯಿತು. ಜೊತೆಗೆ ಸ್ಥಳದಲ್ಲಿ ಇನ್ನೂ ಅನೇಕ ಖಾಲಿ ಬ್ಯಾರೆಲ್ಗಳು, ಖಾಲಿ ಕ್ಯಾನ್ಗಳು ಮತ್ತು ಇತರೆ ಸಂಬಂಧಿತ ಸಾಮಗ್ರಿಗಳೂ ದೊರೆತಿವೆ. ಪತ್ತೆಯಾದ ಡೀಸೆಲ್ ಮತ್ತು ಇತರೆ ವಸ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು ರೂ. 3,50,000 ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಜಗದೀಶ್ನನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಡೀಸೆಲ್ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 35/2026 ಪ್ರಕರಣ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 287 ಹಾಗೂ 3(5), ಅಗತ್ಯ ವಸ್ತುಗಳ ಕಾಯ್ದೆ 1955 ರ ಕಲಂ 3 ಮತ್ತು 7, ಮತ್ತು ಪೆಟ್ರೋಲಿಯಂ ಕಾಯ್ದೆ 1934 ರ ಕಲಂ 23 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





