ನೆಲ್ಯಾಡಿ: ಧರ್ಮಸ್ಥಳ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ: 10 ವರ್ಷಗಳ ಗುಡಿಸಲಿನ ಬದುಕಿಗೆ ತೆರೆ

ಶೇರ್ ಮಾಡಿ

ನೆಲ್ಯಾಡಿ: ಸುಮಾರು 10 ವರ್ಷಗಳಿಂದ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ಈಗ ಸುರಕ್ಷಿತ ಆಶ್ರಯ ಒದಗಿದ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವತಿಯಿಂದ “ವಾತ್ಸಲ್ಯ” ಯೋಜನೆಯಡಿ ಕಟ್ಟೆಮಜಲು ನಿವಾಸಿ ಕೇಶವ ಅವರಿಗೆ ನೂತನ ಮನೆ ನಿರ್ಮಿಸಿ ಶನಿವಾರ ಹಸ್ತಾಂತರಿಸಲಾಯಿತು.

ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಕನಸಿನ ಯೋಜನೆಯಾದ ಈ ವಾತ್ಸಲ್ಯ ಯೋಜನೆಯಡಿ, ಅಸಹಾಯಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಶ್ರಯ ಒದಗಿಸುವ ಮಹತ್ವದ ಕಾರ್ಯ ನಡೆಯುತ್ತಿದೆ. ಕೇಶವ ಅವರ ಕುಟುಂಬವೂ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಎರಡು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಈ ಹಿನ್ನೆಲೆ ಕಾರ್ಯಕರ್ತರ ಪರಿಶೀಲನೆಯ ಬಳಿಕ ಮನೆ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿತ್ತು.ಸುಮಾರು ₹1.90 ಲಕ್ಷ ವೆಚ್ಚದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. ಈಗಾಗಲೇ ಕೇಶವ ಅವರು ಯೋಜನೆಯಡಿ ಪ್ರತಿ ತಿಂಗಳು ಮಾಸಾಶನ ಪಡೆಯುತ್ತಿರುವುದೂ ಗಮನಾರ್ಹವಾಗಿದೆ.

ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಅವರು ವಾತ್ಸಲ್ಯ ಮನೆ ಹಾಸ್ತಾoತರ ಮಾಡಿ ಮಾತನಾಡಿದ ಅವರು ಧರ್ಮಸ್ಥಳದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಲಕ್ಷಾಂತರ ಬಡ ಕುಟುಂಬಗಳಿಗೆ ಕ್ಷೇತ್ರದಿಂದ ಸಹಾಯಹಸ್ತ ಸಿಕ್ಕಿದೆ. ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಈ ವಾತ್ಸಲ್ಯ ಯೋಜನೆ ಆರಂಭಿಸಿದ್ದು ಅಸಹಾಯಕ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಿ ಕೊಡುತ್ತಿರುವುದು ಪುಣ್ಯದ ಕಾರ್ಯ. ಬಡವರ ಕಣ್ಣೀರು ಒರೆಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆಯುತ್ತಿದೆ ಎಂದು ಹೇಳಿದರು.

ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ದುರ್ಗಾಶ್ರೀ ಮಾತನಾಡಿ, ಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಯೋಜನೆಯ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಸ್ವಾವಲಂಬಿಯಾಗಿ, ಸ್ವಾಭಿಮಾನಿಯಾಗಿ ಬದುಕಬೇಕು ಎಂಬುದೇ ಯೋಜನೆಯ ಉದ್ದೇಶವಾಗಿದೆ. ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಯೋಜನೆಯು ಕಾರ್ಯಪ್ರವೃತ್ತವಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿದೆ. ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಕನಸಿನ ಕಾರ್ಯಕ್ರಮವಾಗಿರುವ ವಾತ್ಸಲ್ಯ ಮನೆ ಅಸಹಾಯಕ ಕುಟುಂಬಗಳಿಗೆ ಆಶ್ರಯ ಮತ್ತು ಆಸರೆಯಾಗಿದೆ ಎಂದರು.

ಕಟ್ಟೆಮಜಲು ದೂಮಾವತಿ ದೈವಸ್ಥಾನದ ಅಧ್ಯಕ್ಷ ಸದಾನಂದ ಕುಂಡಡ್ಕ ಅವರು ವಾತ್ಸಲ್ಯ ಮನೆಯ ನಾಮಫಲಕ ಅನಾವರಣಗೊಳಿಸಿದರು. ನೆಲ್ಯಾಡಿ ವಲಯಾಧ್ಯಕ್ಷ ಕುಶಾಲಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನೆಲ್ಯಾಡಿ ಶಿಲ್ಪಾ ಕಾಂಪ್ಲೆಕ್ಸ್ ಮಾಲಕ ಶಿವಣ್ಣ.ಪಿ ಹೆಗ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೌಕ್ರಾಡಿ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಗೌಡ,ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಲಯ ಪ್ರತಿನಿಧಿ ರಮೇಶ್ ಬಾಣಜಾಲು, ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಸದಸ್ಯ ತುಕಾರಾಮ ರೈ ಹೊಸಮನೆ, ನೆಲ್ಯಾಡಿ ವಲಯ ಒಕ್ಕೂಟಗಳ ಅಧ್ಯಕ್ಷರುಗಳಾದ ಸೆಬಾಸ್ಟಿಯನ್ ಪಿ.ಜೆ, ಸುಕುಮಾರ್, ಲೋಕಯ್ಯ ಗೌಡ, ಮಾರ್ಸೆಲ್ ಡಿ ಸೋಜಾ, ಜೋನ್ ಮೊಂತೇರೋ, ಮೇಸ್ತ್ರಿ ರವಿ, ವಾತ್ಸಲ್ಯ ಮನೆ ಫಲಾನುಭವಿ ಕೇಶವ ಕಟ್ಟೆಮಜಲು, ಸೇವಾಪ್ರತಿನಿಧಿಗಳಾದ ಸುಮನಾ, ಸುಮಿತ್ರಾ, ಮೋಹಿನಿ, ಕೌಕ್ರಾಡಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ನೆಲ್ಯಾಡಿ ಶೌರ್ಯ ಘಟಕದ ಸ್ವಯಂ ಸೇವಕರು, ಮನೆಯವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನಮಿತಾ ಎಸ್ ಶೆಟ್ಟಿ ಮತ್ತು ಅಶ್ವಿನಿ ಪ್ರಾರ್ಥಿಸಿದರು. ನೆಲ್ಯಾಡಿ ವಲಯ ಮೇಲ್ವಿಚಾರಕ ಆನಂದ ಡಿ.ಬಿ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನಾ ನಿರೂಪಿಸಿ, ವಂದಿಸಿದರು

Leave a Reply

error: Content is protected !!