





ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬೆಳ್ತಂಗಡಿ ತಾಲೂಕು ವತಿಯಿಂದ ವಾತ್ಸಲ್ಯ ಕಾರ್ಯಕ್ರಮದಡಿ ಅಂಬಿಕಾ ಅವರ ಕುಟುಂಬಕ್ಕೆ ಹೊಸ ಮನೆಯನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು. ಈ ಮೂಲಕ ದೀರ್ಘಕಾಲದಿಂದ ವಾಸಕ್ಕೆ ಯೋಗ್ಯವಾದ ಸೂರಿಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆಮ್ಮದಿಯ ಆಶ್ರಯ ದೊರೆತಿದೆ.
ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಯೋಜನೆಯಾದ “ವಾತ್ಸಲ್ಯ” ಕಾರ್ಯಕ್ರಮದಡಿ, ಧರ್ಮಸ್ಥಳ ವಲಯದ ಕಳೆಂಜ ಎ ಕಾರ್ಯಕ್ಷೇತ್ರದ ಕಾಯರ್ತಡ್ಕ ಮಾಣಿಗೇರಿ ನಿವಾಸಿ ಅಂಬಿಕಾ ಅವರು ಈಗಾಗಲೇ ಮಾಶಾಸನ ಪಡೆಯುತ್ತಿರುವ ಸದಸ್ಯರಾಗಿದ್ದು, ಅವರ ಮನೆಯ ದುಸ್ಥಿತಿಯನ್ನು ಗಮನಿಸಿ ಯೋಜನೆಯ ವತಿಯಿಂದ ಹೊಸ ಮನೆ ನಿರ್ಮಿಸಿ ನೀಡಲಾಗಿದೆ.
ಯೋಜನಾಧಿಕಾರಿ ಯಶೋಧರ ಕೆ. ಅವರು ಅಂಬಿಕಾ ಅವರಿಗೆ ಮನೆಯನ್ನು ಹಸ್ತಾಂತರಿಸಿ, ಆಹಾರ ಎಷ್ಟೋ ಮುಖ್ಯವೋ, ಅದೇ ರೀತಿ ವಾಸಕ್ಕೊಂದು ಸೂರು ಕೂಡ ಅಗತ್ಯ ಎಂಬ ಮಾತೃಶ್ರೀ ಅಮ್ಮನವರ ಸಂಕಲ್ಪದಂತೆ ಈ ಯೋಜನೆ ನಿರ್ಗತಿಕರ ಬದುಕಿಗೆ ಬೆಳಕು ನೀಡುತ್ತಿದೆ ಎಂದು ಹೇಳಿದರು. ಹೊಸ ಮನೆಯಲ್ಲಿ ಅಂಬಿಕಾ ಅವರು ಸುಖವಾಗಿ ಜೀವನ ಸಾಗಿಸಲಿ ಎಂದು ಶುಭ ಹಾರೈಸಿದರು.
ಜನಜಾಗೃತಿ ವಲಯಾಧ್ಯಕ್ಷ ರಾಜೇಶ್ ಎಂ.ಕೆ. ಅವರು ಮಾತನಾಡಿ, ವಾತ್ಸಲ್ಯ ಕಾರ್ಯಕ್ರಮವು ನಿರ್ಗತಿಕರಿಗೆ ಆಶ್ರಯ ನೀಡುವ ಅರ್ಥಪೂರ್ಣ ಯೋಜನೆಯಾಗಿದ್ದು, ಅನೇಕ ಕುಟುಂಬಗಳಿಗೆ ಬದುಕಿನ ನೆಲೆಯಾಗಿ ಪರಿಣಮಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಎಚ್., ಸದಸ್ಯರಾದ ಹರೀಶ್ ಗೌಡ, ಮಾಜಿ ಸದಸ್ಯ ಪ್ರಮೋದ ನಾಯರ್, ಭಜರಂಗದಳ ಜಿಲ್ಲಾ ಸಂಚಾಲಕ ಗಣೇಶ್ ಮೀಯ, ತಾಲೂಕು ಸಂಚಾಲಕ ಅಶೋಕ್, ಒಕ್ಕೂಟದ ಅಧ್ಯಕ್ಷ ಧರ್ಣಪ್ಪ ಕುಂಬಾರ, ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಸೇವಾ ಪ್ರತಿನಿಧಿಗಳಾದ ಜನಾರ್ಧನ್, ಹರಿನಾಕ್ಷಿ, ಚೈತ್ರ, ಗೀತಾ ಸೇರಿದಂತೆ ಸ್ಥಳೀಯ ಒಕ್ಕೂಟದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಮೇಲ್ವಿಚಾರಕ ರವೀಂದ್ರ ಬಿ. ಸ್ವಾಗತಿಸಿದರು, ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧುರಾ ವಸಂತ್ ವಂದಿಸಿದರು.





