





ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮರುವಂತಿಲ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ತೀವ್ರಗೊಂಡಿದ್ದು, ಕೃಷಿ ತೋಟಗಳು ಮತ್ತು ನಿವಾಸ ಪ್ರದೇಶಗಳಿಗೆ ಹಾನಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚುರುಕಾಗಿದೆ. ಮಾ.28ರಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ ಅವರು ಹಾನಿಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ, ಸರ್ಕಾರದಿಂದ ದೊರೆಯುವ ಪರಿಹಾರ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು.
ಕಾಡಾನೆ ಸಂಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ವಿಶೇಷ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವನ್ನು ನಿಯೋಜಿಸಲಾಗಿದ್ದು, ತಂಡವು ಹಗಲು-ರಾತ್ರಿ ಕಾಡಾನೆ ಚಲನವಲನಗಳ ಮೇಲೆ ನಿಗಾ ಇಟ್ಟಿದೆ.
ಮಾ.25ರಂದು ರಾತ್ರಿ ಮರುವಂತಿಲದ ಕೃಷಿಕ ವಿಜಯ ಎನ್. ಶಬರಾಯ ಅವರ ವಿಜಯ-ವಿಹಾರ ನಿವಾಸದ ಬಳಿ ಸುಮಾರು 1 ಗಂಟೆ ವೇಳೆಗೆ ಕಾಡಾನೆ ಕಾಣಿಸಿಕೊಂಡು, ಮನೆಯ ಗೇಟ್‌ನ್ನು ಮುರಿದು ಧ್ವಂಸಗೊಳಿಸಿದೆ. ನಂತರ ಅವರ ಗೇರು ತೋಟಕ್ಕೂ ಹಾನಿ ಮಾಡಿದೆ. ಅಲ್ಲದೆ, ಆನಂದ ಗೌಡ ಅವರ 7 ತೆಂಗಿನ ಮರಗಳು, ಕುಶಾಲಪ್ಪ ಗೌಡ ಅವರ 4 ತೆಂಗಿನ ಮರಗಳು ಹಾಗೂ ಸುಂದರ ನಾಯ್ಕ ಅವರ 2 ತೆಂಗಿನ ಮರಗಳನ್ನು ಕಾಡಾನೆ ನೆಲಸಮಗೊಳಿಸಿದೆ. ಈ ಕಾಡಾನೆ ಸಂಚಲನದ ದೃಶ್ಯಗಳು ವಿಜಯ ವಿಹಾರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಈ ಪ್ರದೇಶದಲ್ಲಿ ಕಳೆದ 6–7 ದಿನಗಳಿಂದ ನಿರಂತರವಾಗಿ ಕಾಡಾನೆ ಸಂಚಾರ ನಡೆಯುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಇದಕ್ಕೂ ಮುನ್ನ ಮಾ.23ರಂದು ಸಂಜೆ ಪಟ್ಟೂರಿನಿಂದ ಸೌತಡ್ಕ ಕಡೆಗೆ ಸಾಗುವ ವಸರಿಕಟ್ಟೆ ಪ್ರದೇಶದಲ್ಲಿ ಕಾಲೇಜಿನಿಂದ ಬಸ್‌ನಲ್ಲಿ ಇಳಿದು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಹಾಗೂ ಬೈಕ್ ಸವಾರನಿಗೆ ಕಾಡಾನೆ ಎದುರಾದ ಘಟನೆ ಕೂಡ ನಡೆದಿದೆ.
ಘಟನೆ ಕುರಿತು ಮಾಹಿತಿ ಪಡೆದ ಉಪ್ಪಿನಂಗಡಿ ವಲಯದ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಗಸ್ತು ವನಪಾಲಕರಾದ ದಿವಾಕರ, ವಿನಯಚಂದ್ರ ಹಾಗೂ ಸಿಬ್ಬಂದಿ ದಾಮೋದರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಗ್ರಾಮಸ್ಥರು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಅರಣ್ಯ ಇಲಾಖೆ ಸೂಚನೆ ನೀಡಿದ್ದು, ವಿಶೇಷವಾಗಿ ಆ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದೆ. ಕಾಡಾನೆ ಹಾವಳಿಯನ್ನು ತಡೆಗಟ್ಟಲು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2026 ರಂತೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಕಲಂ 66ರಡಿ ತನಿಖೆ ಕೈಗೊಳ್ಳಲಾಗಿತ್ತು.





