ಕೊಕ್ಕಡ: ಗಾಳಿ-ಮಳೆಗೆ ಭಾರೀ ಹಾನಿ: ಶಾಸಕ ಹರೀಶ್ ಪೂಂಜಾ ಭೇಟಿ

ಶೇರ್ ಮಾಡಿ

 

ಕೊಕ್ಕಡ:ಬೆಳ್ತಂಗಡಿ ತಾಲೂಕಿನಲ್ಲಿ ಗಾಳಿ-ಮಳೆಗೆ ಭಾರೀ ಹಾನಿ: ಶಾಸಕ ಹರೀಶ್ ಪೂಂಜ ಭೇಟಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನಾದ್ಯಂತ ಶನಿವಾರ ಸಂಜೆ ಬೀಸಿದ ಭಾರೀ ಗಾಳಿ-ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಕೊಕ್ಕಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ಹಾಗೂ ಕೃಷಿ ತೋಟಗಳು ಹಾನಿಗೀಡಾಗಿರುವ ಘಟನೆ ವರದಿಯಾಗಿದೆ.

ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಶನಿವಾರ ರಾತ್ರಿ ಕೊಕ್ಕಡದಲ್ಲಿ ಹಾನಿಗೀಡಾದ ಗಣೇಶ್ ಅವರ ಮನೆ ಹಾಗೂ ಕೊಕ್ಕಡ ದಡ್ಡು ನಿವಾಸಿ ಕಾಂತಪ್ಪ ಗೌಡ ಅವರ ಮನೆಗೆ ಭೇಟಿ ನೀಡಿದ ಶಾಸಕರು, ಪರಿಸ್ಥಿತಿಯನ್ನು ಅವಲೋಕಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಗಾಳಿ-ಮಳೆಯಿಂದ ಕೊಕ್ಕಡ, ಪಟ್ರಮೆ, ಪಟ್ಟೂರು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ. ಪಟ್ರಮೆ ಬೋಳೋಡಿ ನಿವಾಸಿ ಲಲಿತ ನಾಯ್ಕ ಅವರ ಮನೆಯ ಶೀಟು ಹಾಗೂ ಹಂಚುಗಳು ಹಾನಿಗೀಡಾಗಿದ್ದು, ಕುತ್ಯಾಡಿ ಭಾಗದ ಭಾಗ್ಯ ಅವರ ಮನೆಯ ಶೀಟುಗಳು ಹಾರಿ ಹೋಗಿವೆ. ವಾಸುದೇವ ಗೌಡ ಅವರ ಮನೆಯ ಮಹಡಿ ಹಂಚುಗಳು ಜಾರಿಹೋಗಿದ್ದು, ಪಟ್ರಮೆ ಕಾಡುಮನೆ ನಿವಾಸಿ ದುಗ್ಗಣ್ಣ ಗೌಡ ಅವರ ಅಡಿಕೆ ತೋಟಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ.

ಇದೇ ರೀತಿ ಪಟ್ರಮೆ ಗಣೇಶ್ ಕೊಲಂಬೆ, ಪಟ್ರಮೆ ಕಲ್ಲಬಾವಿ ಡೀಕ್ಕಯ್ಯ, ಮಿತ್ತಡ್ಕ ಸಂಜೀವ, ಪಚ್ಚಮನೆ ಪುಷ್ಪ ಅವರ ಮನೆಗಳಿಗೆ ಗಾಳಿ-ಮಳೆಯ ಅಬ್ಬರದಿಂದ ಹಾನಿಯಾಗಿದ್ದು, ಅನೇಕ ಕಡೆಗಳಲ್ಲಿ ಕೃಷಿ ತೋಟಗಳು ಹಾನಿಗೊಂಡಿರುವ ಘಟನೆ ವರದಿಯಾಗಿದೆ.

ಕೊಕ್ಕಡ ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಮಾಹಿತಿ ಸಂಗ್ರಹಿಸುವಲ್ಲಿ ತೊಡಗಿದ್ದಾರೆ. ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Leave a Reply

error: Content is protected !!