





ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕೃಷಿ ತೋಟಗಳಿಗೆ ನುಗ್ಗಿ ಬೆಳೆ ಹಾನಿಗೊಳಿಸುತ್ತಿದ್ದ ಕಾಡಾನೆಗಳು ಇದೀಗ ಮನೆಗಳ ಸುತ್ತಮುತ್ತ ಸಂಚರಿಸುವುದಷ್ಟೇ ಅಲ್ಲದೆ, ವಾಹನಗಳ ಮೇಲೂ ದಾಳಿ ನಡೆಸುತ್ತಿರುವ ಘಟನೆಗಳು ವರದಿಯಾಗಿತ್ತು.
ಈ ಹಿನ್ನಲೆಯಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ತುರ್ತು ಕ್ರಮವಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಗುಂಡ್ಯ ಹಾಗೂ ಸುಳ್ಯ ಭಾಗಗಳಲ್ಲಿ ಕಾರ್ಯಾಚರಿಸುತ್ತಿದ್ದ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡವನ್ನು ಕೊಕ್ಕಡ ಪ್ರದೇಶಕ್ಕೆ ನಿಯೋಜಿಸಲಾಗಿದೆ.
ಸುಮಾರು 25 ಮಂದಿ ಸದಸ್ಯರನ್ನು ಒಳಗೊಂಡಿರುವ ಈ ವಿಶೇಷ ತಂಡವು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಚ್.ಪಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಗಸ್ತು ವನಪಾಲಕರಾದ ವಿನಯಚಂದ್ರ, ಸುನಿಲ್ ಹಾಗೂ ಶಿವಾನಂದ ಕುದುರಿ ಸೇರಿದಂತೆ ಅರಣ್ಯ ಸಿಬ್ಬಂದಿಗಳು ತಂಡದ ಜೊತೆ ಹಗಲು-ರಾತ್ರಿ ಸ್ಥಳದಲ್ಲೇ ಬೀಡುಬಿಟ್ಟು ಕಾಡಾನೆಗಳ ಚಲನವಲನವನ್ನು ಗಮನಿಸುತ್ತಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ, ಕಾಡಾನೆಗಳ ಚಲನೆಗೆ ಅನುಗುಣವಾಗಿ ಮುಂದಿನ ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಅವುಗಳನ್ನು ಕಾಡಿನೊಳಗೆ ಹಿಂದಕ್ಕೆ ಓಡಿಸುವ ಕಾರ್ಯಾಚರಣೆಗೂ ಸಿದ್ಧತೆ ನಡೆಸಲಾಗಿದೆ. ಇದರ ನಡುವೆ ಅರಣ್ಯ ಇಲಾಖೆ ಗ್ರಾಮಸ್ಥರಿಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಅನಗತ್ಯವಾಗಿ ಹೊರಗಡೆ ಸಂಚರಿಸಬಾರದು, ಕಾಡು ಪ್ರದೇಶಗಳ ಸಮೀಪ ಹೋಗುವಾಗ ಹೆಚ್ಚಿನ ಜಾಗ್ರತೆ ವಹಿಸಬೇಕು ಹಾಗೂ ಕಾಡಾನೆ ಕಂಡುಬಂದಲ್ಲಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದೆ.




